ಬೆಂಗಳೂರು:
“ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ 190 ಕಿ.ಮೀ ನಷ್ಟು ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಿದ್ದು, 8 ಕಂಪನಿಗಳು ಇದಕ್ಕೆ ಅರ್ಹತೆ ಪಡೆದುಕೊಂಡಿವೆ. ಈ ಕಂಪನಿಗಳು ಕಾರ್ಯಸಾಧ್ಯತಾ ವರದಿ ಸಲ್ಲಿಸಲಿದ್ದು, 45 ದಿನಗಳ ಒಳಗಾಗಿ ಸಾರ್ವಜನಿಕ ಟೆಂಡರ್ ಕರೆಯಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು: “ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಕಾರಿಡಾರ್ ಅಭಿವೃದ್ಧಿಪಡಿಸಲು ಟೆಂಡರ್ ಕರೆದಿದ್ದೆವು. ಈ ವಿಚಾರವಾಗಿ ಅನೇಕರು ತಮ್ಮ ಪ್ರಸ್ತಾವನೆ ಸಲ್ಲಿಸಿದ್ದರು. ರಸ್ತೆ ಮೂಲಸೌಕರ್ಯ, ದಟ್ಟಣೆ ನಿವಾರಣೆ, ಟನಲ್ ರಸ್ತೆ, ರಸ್ತೆ ಅಗಲೀಕರಣ ವಿಚಾರವಾಗಿ ಸಲಹೆ ಪಡೆದಿದ್ದೆವು. ಟನಲ್ ರಸ್ತೆ ವಿಚಾರದಲ್ಲಿ ಬಂಡವಾಳವನ್ನು ತರಬೇಕು ಎಂದು ನಾವು ಸೂಚಿಸಿದ್ದೆವು. ಅಂತಾರಾಷ್ಟ್ರೀಯ ಬಿಡ್ಡಿಂಗ್ ಮಾಡಿದ ಪರಿಣಾಮ 9 ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, ಕೊನೆ ದಿನಾಂಕ ಮುಕ್ತಾಯವಾಗಿದೆ.”
ಟನಲ್ ರಸ್ತೆ 4 ಪಥದಲ್ಲಿ ಮಾಡಬೇಕೇ, 6 ಪಥದಲ್ಲಿ ಮಾಡಬೇಕೇ? ಎಲ್ಲಿ ಆರಂಭವಾಗಿ ಎಲ್ಲಿ ಅಂತ್ಯವಾಗಬೇಕು, ಎಲ್ಲೆಲ್ಲಿ ತೆರೆದುಕೊಳ್ಳಬೇಕು? ಬೆಂಗಳೂರಿನಾದ್ಯಂತ ವಿಸ್ತರಣೆ ಮಾಡಬೇಕಾ ಎಂಬ ವಿಚಾರವಾಗಿ ನಾವು ತೀರ್ಮಾನ ಮಾಡಬೇಕು. ಇದೆಲ್ಲವೂ ಒಂದೆರಡು ದಿನಗಳಲ್ಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಕಂಪನಿಗಳು ಅಧ್ಯಯನ ಮಾಡಿ ವರದಿ ನೀಡಲಿವೆ.
ಈ ಯೋಜನೆ ಬಹಳ ದೊಡ್ಡ ಪ್ರಮಾಣದಲ್ಲಿದ್ದು, ಭಾರಿ ಪ್ರಮಾಣದ ಹಣಕಾಸಿನ ಅಗತ್ಯವಿದೆ. ಹೀಗಾಗಿ ಇದನ್ನು ವಿವಿಧ ಹಂತಗಳಲ್ಲಿ ಮಾಡಬೇಕಾಗುತ್ತದೆ. ನಾವು ಸದ್ಯಕ್ಕೆ 190 ಕಿ.ಮೀ ನಷ್ಟು ಪ್ರಸ್ತಾವನೆ ನೀಡಿದ್ದೇವೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ ಟಿ ಮಾಲ್ ಜಕ್ಷನ್ ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ ಶಿರಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆ ಯಶವಂತಪುರ ಜಕ್ಷನ್, ಹೊರ ವರ್ತುಲ ರಸ್ತೆಯಲ್ಲಿ ಗುರಗುಂಟೆ ಪಾಳ್ಯ, ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಗುರುತಿಸಿದ್ದು, ಆದ್ಯತೆ ಮೇರೆಗೆ ಈ ಪ್ರದೇಶಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲಿ ಯಾವ ರೀತಿ ಈ ಟನಲ್ ರಸ್ತೆ ಮಾಡಬಹುದು ಎಂದು ಕಂಪನಿಗಳು ಅಧ್ಯಯನ ನಡೆಸಲಿವೆ.
ನಮ್ಮಲ್ಲಿ ಟನಲ್ ಕೊರೆಯುವ ಯಂತ್ರ ಚಿಕ್ಕದಿದೆ. ಮುಂಬೈ ಹಾಗೂ ಉತ್ತರ ಭಾರತದಲ್ಲಿ ಈಗ ಟನಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕನಿಷ್ಠ ನಾಲ್ಕು ಪಥದ ಟನಲ್ ರಸ್ತೆ ಬೇಕು. ಈ ರಸ್ತೆಗಳು ತೆರೆದುಕೊಳ್ಳು ಹೆಚ್ಚಿನ ಜಾಗಗಳು ಬೇಕು. ಗಾಲ್ಫ್ ಕೋರ್ಸ್, ಟರ್ಫ್ ಕ್ಲಬ್, ಅರಮನೆ ಮೈದಾನ ಜಾಗಗಳನ್ನು ಬೊಮ್ಮಾಯಿ ಅವರ ಕಾಲದಲ್ಲಿ ಗುತ್ತಿಗೆ ವಿಸ್ತರಣೆ ಮಾಡಿದ್ದು, ಅವರ ಜತೆ ನ್ಯಾಯ ಪಂಚಾಯ್ತಿ ಮಾಡಬೇಕಿದೆ.
ಟನಲ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರು ದುಡ್ಡು ಮಾಡುವ ಯೋಜನೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಜನ ನನಗೆ ಅಧಿಕಾರ, ಜವಾಬ್ದಾರಿ ನೀಡಿದ್ದು, ಅದರ ಮೇಲೆ ನಾನು ಕೆಲಸ ಮಾಡುತ್ತೇನೆ. ವಿರೋಧ ಪಕ್ಷದವರನ್ನು ಕೇಳಿ ಯೋಜನೆ ರೂಪಿಸಲು ಸಾಧ್ಯವೇ? ಕೋಳಿ ಕೇಳಿ ಮಸಾಲೆ ರೆಡಿ ಮಾಡುವುದಿಲ್ಲ” ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೆರವು ಕೇಳುತ್ತೀರಾ ಎಂದು ಪ್ರಶ್ನಿಸಿದಾಗ, “ಖಂಡಿತವಾಗಿ ಕೇಂದ್ರದ ನೆರವು ಕೇಳುತ್ತೇವೆ. ಈ ಪ್ರಸ್ತಾವನೆಗಳು ಸಲ್ಲಿಕೆಯಾದ ನಂತರ ನಾವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈಗಾಗಲೇ ನಾನು ಮುಖ್ಯಮಂತ್ರಿಗಳು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿದೆ. ತುಮಕೂರು ರಪಸ್ತೆ, ಕೆ.ಆರ್ ಪುರಂ ರಸ್ತೆ, ಮೈಸೂರು ರಸ್ತೆ ಮೂಲಕ ಸಂಚಾರ ದಟ್ಟಣೆ ಆಗಮಿಸುತ್ತಿದೆ. ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡಿದ್ದು, ಅವರೂ ಸಲಹೆ ನೀಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ತಿಳಿಸಿದರು.