ಬೆಂಗಳೂರು: ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಆರು ವರ್ಷದ ಬಾಲಕಿ ಬೈಕ್ನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಂದಿನಿ ಲೇಔಟ್ ನಿವಾಸಿ ಪರಮೇಶ್ವರ್ ಅವರ ಪುತ್ರಿ ಹಾರಿಕಾ (6) ಎಂದು ಗುರುತಿಸಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಬುಧವಾರ (ಜ.14) ಸಂಜೆ ಸುಮಾರು 6 ಗಂಟೆಗೆ ಪರಮೇಶ್ವರ್ ಅವರು ತಮ್ಮ ಮಗಳನ್ನು ದ್ವಿಚಕ್ರ ವಾಹನದ ಹಿಂಬದಿ ಕೂರಿಸಿಕೊಂಡು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಹಳ್ಳಿ ಡೌನ್ ರ್ಯಾಂಪ್ ಬಳಿ ಸಾಗುತ್ತಿದ್ದಾಗ ಹಠಾತ್ ಬ್ರೇಕ್ ಹಾಕಿದ್ದಾರೆ.
ಈ ವೇಳೆ ನಿಯಂತ್ರಣ ತಪ್ಪಿದ ಬಾಲಕಿ ಬೈಕ್ನಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ರಾತ್ರಿ ಸುಮಾರು 9 ಗಂಟೆಗೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ವಿಜಯನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿ ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯವಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
