ಬೆಂಗಳೂರು: ಪಶ್ಚಿಮ ಬೆಂಗಳೂರಿನ ಪ್ರಯಾಣಿಕರಿಗೆ ಮಹತ್ವದ ರಿಲೀಫ್ ನೀಡುವಂತೆ ಸೌತ್ ವೆಸ್ಟರ್ನ್ ರೈಲ್ವೇ, ಬೆಂಗಳೂರು ವಿಭಾಗದ ವ್ಯಾಪ್ತಿಯ ನಯಂದಹಳ್ಳಿ ರೈಲು ನಿಲ್ದಾಣದಲ್ಲಿ ನಾಲ್ಕು ಜೋಡಿ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಯೋಗಾತ್ಮಕ ನಿಲುಗಡೆ ನೀಡಲು ತೀರ್ಮಾನಿಸಿದೆ. ಈ ವ್ಯವಸ್ಥೆ ಫೆಬ್ರವರಿ 17, 2026ರಿಂದ ಜಾರಿಗೆ ಬರಲಿದೆ.
ಹುಬ್ಬಳ್ಳಿ ಕೇಂದ್ರ ಕಚೇರಿಯಿಂದ ಪ್ರಕಟಣೆ ನೀಡಿರುವ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಾಡಿ ಅವರು ವಿವರಿಸಿದಂತೆ, ಕೆಳಗಿನ ರೈಲುಗಳಿಗೆ ನಿಲುಗಡೆ ಕಲ್ಪಿಸಲಾಗಿದೆ:
ರೈಲು ಸಂಖ್ಯೆ 16215 ಮೈಸೂರು–ಕೆಎಸ್ಆರ್ ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ ಫೆ.17ರಿಂದ ಬೆಳಿಗ್ಗೆ 08:45ಕ್ಕೆ ಆಗಮಿಸಿ 08:46ಕ್ಕೆ ನಿರ್ಗಮಿಸುತ್ತದೆ. ಪ್ರತಿದಿನ ಸಂಚರಿಸುವ ರೈಲು ಸಂಖ್ಯೆ 16216 ಕೆಎಸ್ಆರ್ ಬೆಂಗಳೂರು–ಮೈಸೂರು ಚಾಮುಂಡಿ ಎಕ್ಸ್ಪ್ರೆಸ್ ಸಂಜೆ 06:39ಕ್ಕೆ ಆಗಮಿಸಿ 06:40ಕ್ಕೆ ಹೊರಡುತ್ತದೆ.
ರೈಲು ಸಂಖ್ಯೆ 17307 ಮೈಸೂರು–ಬಾಗಲಕೋಟೆ ಬಸವ ಎಕ್ಸ್ಪ್ರೆಸ್ ಮಧ್ಯಾಹ್ನ 03:16ಕ್ಕೆ ಆಗಮಿಸಿ 03:17ಕ್ಕೆ ನಿರ್ಗಮಿಸುತ್ತದೆ. ಪ್ರಯಾಣ ಆರಂಭ ದಿನಾಂಕ ಫೆ.16ರಿಂದ ಜಾರಿಯಾಗುವ ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಎಕ್ಸ್ಪ್ರೆಸ್ ಬೆಳಿಗ್ಗೆ 08:19ಕ್ಕೆ ಆಗಮಿಸಿ 08:20ಕ್ಕೆ ಹೊರಡುತ್ತದೆ.
ರೈಲು ಸಂಖ್ಯೆ 16235 ಟೂಟಿಕೋರಿನ್–ಮೈಸೂರು ಎಕ್ಸ್ಪ್ರೆಸ್ ಬೆಳಿಗ್ಗೆ 06:49ಕ್ಕೆ ಆಗಮಿಸಿ 06:50ಕ್ಕೆ ನಿರ್ಗಮಿಸುತ್ತದೆ. ರೈಲು ಸಂಖ್ಯೆ 16236 ಮೈಸೂರು–ಟೂಟಿಕೋರಿನ್ ಎಕ್ಸ್ಪ್ರೆಸ್ ರಾತ್ರಿ 08:14ಕ್ಕೆ ಆಗಮಿಸಿ 08:15ಕ್ಕೆ ಹೊರಡುತ್ತದೆ.
ರೈಲು ಸಂಖ್ಯೆ 16535 ಮೈಸೂರು–ಪಾಂಡರ್ಪುರ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಸಂಜೆ 05:40ಕ್ಕೆ ಆಗಮಿಸಿ 05:41ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 16536 ಪಾಂಡರ್ಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್ಪ್ರೆಸ್ ಬೆಳಿಗ್ಗೆ 07:44ಕ್ಕೆ ಆಗಮಿಸಿ 07:45ಕ್ಕೆ ನಿರ್ಗಮಿಸುತ್ತದೆ.
ಈ ನಿಲುಗಡೆಗಳು ಪ್ರಯೋಗಾತ್ಮಕ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಹಾಗೂ ಕಾರ್ಯಾಚರಣಾ ಅನುಕೂಲತೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ನಯಂದಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಯಾಣಿಕರಿಗೆ ಈ ಕ್ರಮದಿಂದ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.
