ಬೆಂಗಳೂರಿನಲ್ಲಿ ಸಮರ್ಪಕ ನೀರು ಸರಬರಾಜು; ಬೇಸಿಗೆ ನಿರ್ವಹಣೆ ಯಶಸ್ವಿ – ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್
ಬೆಂಗಳೂರು: ನಗರದಲ್ಲಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಮತ್ತು ನಿರಂತರ ಸರಬರಾಜು ನಡೆಯುತ್ತಿದ್ದು, ಎಲ್ಲಿಯೇ ವ್ಯತ್ಯಯ ಉಂಟಾದರೂ ತಕ್ಷಣ ಸ್ಪಂದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೊಂದರೆ ಅನುಭವಿಸಿದ್ದ ಕನಕಪುರ ರಸ್ತೆ ಭಾಗದ ಬನಗಿರಿನಗರ, ಭುವನೇಶ್ವರಿನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಪ್ರಸ್ತುತ ನೀರಿನ ಸರಬರಾಜು ಪರಿಸ್ಥಿತಿಯನ್ನು ಸ್ಥಳೀಯರೊಂದಿಗೆ ಚರ್ಚಿಸಿ ಖುದ್ದಾಗಿ ಪರಿಶೀಲಿಸಿದರು.
ಈ ಬಾರಿ ನೀರಿನ ಪೂರೈಕೆ ಸುಧಾರಿಸಿರುವ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು. ಬನಗಿರಿನಗರ ನಿವಾಸಿ ಸುಬ್ಬಮ್ಮ ಮಾತನಾಡಿ, “ಕಳೆದ ವರ್ಷ ತುಂಬಾ ತೊಂದರೆ ಅನುಭವಿಸಿದ್ದೇವೆ. ಆದರೆ ಈ ಬಾರಿ ಜಲಮಂಡಳಿಯ ಮುಂಜಾಗ್ರತಾ ಕ್ರಮಗಳಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ,” ಎಂದರು.
ಇನ್ನೊಬ್ಬ ನಿವಾಸಿ ಮಲ್ಲಪ್ಪ ಪ್ರತಿಕ್ರಿಯಿಸಿ, “ಮಿನಿ ಟ್ಯಾಂಕ್ಗಳ ಅಳವಡಿಕೆ ಹಾಗೂ ಕಾವೇರಿ ನೀರಿನ ಸಂಪರ್ಕದಿಂದ ನಮಗೆ ಬಹಳ ಅನುಕೂಲವಾಗಿದೆ. ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ನಮ್ಮ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು,” ಎಂದು ಮನವಿ ಮಾಡಿದರು.
ಪರಿಶೀಲನೆ ಬಳಿಕ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
“ನಗರದ ನೀರಿನ ಸರಬರಾಜು ಕುರಿತು ಪ್ರತಿದಿನ ಅಧಿಕಾರಿಗಳಿಂದ ವರದಿ ಪಡೆಯುತ್ತಿದ್ದು, ಯಾವುದೇ ಲೋಪ ಕಂಡುಬಂದರೆ ತಕ್ಷಣ ಸರಿಪಡಿಸಲು ಸೂಚಿಸುತ್ತಿದ್ದೇನೆ. ಸಂಚಾರಿ ಕಾವೇರಿ ಟ್ಯಾಂಕರ್ಗಳು ಮತ್ತು ಮಿನಿ ಟ್ಯಾಂಕ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ,” ಎಂದು ವಿವರಿಸಿದರು.
ಈ ವೇಳೆ ಜಲಮಂಡಳಿಯ ಮುಖ್ಯ ಅಭಿಯಂತರ ವೆಂಕಟೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
