ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗುಂಡಿ ರಹಿತ ರಸ್ತೆ, ಪ್ರಗತಿಯಲ್ಲಿರುವ ಕಾಮಗಾರಿಗಳ ಮೇಲ್ವಿಚಾರಣೆ, ಸ್ವಚ್ಛತೆ ಮತ್ತು ಸಾರ್ವಜನಿಕ ಸೌಲಭ್ಯಗಳ ಸುಧಾರಣೆ ಕುರಿತು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಅವರು ಸ್ಥಳ ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
- ಗುಂಡಿ ಮುಚ್ಚುವಿಕೆ: ಅರ್ಟೀರಿಯಲ್, ಸಬ್-ಅರ್ಟೀರಿಯಲ್, ಹೈ ಡೆನ್ಸಿಟಿ ಕಾರಿಡಾರ್ ಹಾಗೂ ವಾರ್ಡ್ ಮಟ್ಟದ ಎಲ್ಲಾ ರಸ್ತೆಗಳಲ್ಲಿಯೂ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ, ಪಶ್ಚಿಮ ಬೆಂಗಳೂರು ವ್ಯಾಪ್ತಿಯಲ್ಲಿ ಸಂಪೂರ್ಣ ಗುಂಡಿ ರಹಿತ ರಸ್ತೆಗಳಾಗುವಂತೆ ನೋಡಿಕೊಳ್ಳಬೇಕು.
- ಟ್ರಾಫಿಕ್ ಪೊಲೀಸರ ಸಹಕಾರ: ಟ್ರಾಫಿಕ್ ಇಲಾಖೆಯೊಂದಿಗೆ ಜಂಟಿಯಾಗಿ ಗುರುತಿಸಲಾದ ಗುಂಡಿಗಳನ್ನು ತಕ್ಷಣ ಸರಿಪಡಿಸಬೇಕು.
- ಸ್ಥಳ ಪರಿಶೀಲನೆ: ಸಹಾಯಕ ಇಂಜಿನಿಯರ್ (AE) ಮತ್ತು ಜೂನಿಯರ್ ಇಂಜಿನಿಯರ್ (JE) ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯ ಮುಂಚೆ–ಮಧ್ಯೆ–ನಂತರದ ಫೋಟೋಗಳನ್ನು ದಾಖಲಾತಿಗಾಗಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
- ಸ್ವಚ್ಛತೆ: ಕಟ್ಟಡ ಭಗ್ನಾವಶೇಷ ಹಾಗೂ ಕಸವನ್ನು ರಸ್ತೆಗಳ ಬದಿಯಲ್ಲಿ ಬಿಸಾಡದಂತೆ ತಡೆಯಬೇಕು, ವಾರ್ಡ್ ಮಟ್ಟದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.
- ಅಧಿಕಾರಿ ಡೈರೆಕ್ಟರಿ: ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ಡೈರೆಕ್ಟರಿಯನ್ನು ಸಿದ್ಧಪಡಿಸಬೇಕು.
ಆಯುಕ್ತರ ಸ್ಥಳ ಪರಿಶೀಲನೆಗಳು:
- ಮತ್ತಿಕೇರಿ ವಾರ್ಡ್: ನೇತಾಜಿ ವೃತ್ತದ ಮಸ್ಟರಿಂಗ್ ಕೇಂದ್ರದಲ್ಲಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿ, ಸಮಯಪಾಲನೆ ಕಡ್ಡಾಯ ಮಾಡುವಂತೆ ನಿರ್ದೇಶಿಸಿದರು. ಕಸ ಎಸೆಯುವವರನ್ನು ಗುರುತಿಸಿ, ನಾಗರಿಕರ ಸಹಕಾರದಿಂದ ಬ್ಲಾಕ್ ಸ್ಪಾಟ್ ನಿರ್ಮೂಲನೆ ಮಾಡಲು ಸೂಚನೆ ನೀಡಿದರು.
- ತ್ಯಾಜ್ಯ ತೆರವು: ರಸ್ತೆಗಳ ಬದಿಯಲ್ಲಿ ಕಂಡುಬಂದ ಕಟ್ಟಡ ಭಗ್ನಾವಶೇಷ ಹಾಗೂ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಲು ಆದೇಶ ನೀಡಿದರು.
- ಪಾದಚಾರಿ ಮಾರ್ಗ ದುರಸ್ತಿ: ಮತ್ತಿಕೇರಿ 1ನೇ ಬಿ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡಿಗೆಯ ಮೂಲಕ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಅನುಕೂಲವಾಗುವ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ತ್ವರಿತ ದುರಸ್ತಿ ಕಾರ್ಯ ನಡೆಸಲು ಸೂಚಿಸಿದರು.
- ಅಟಲ್ ಜಿ ಉದ್ಯಾನವನ (ವಾರ್ಡ್ 45): ಉದ್ಯಾನವನದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ, ಹಾಳಾಗಿರುವ ಜಿಮ್ ಉಪಕರಣಗಳನ್ನು ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.
ಅಭಿವೃದ್ಧಿ ಉಪ ಆಯುಕ್ತ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತ ಆರತಿ ಆನಂದ ಹಾಗೂ ಸಂಗಪ್ಪ, ಮುಖ್ಯ ಅಭಿಯಂತರ ರಾಜೇಶ್ ಮತ್ತು ಸ್ವಯಂಪ್ರಭಾ, ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ, ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.