ಬಸವ ಜಯಂತಿ ಅಂಗವಾಗಿ ಬೆಂಗಳೂರು ಯುವೋತ್ಸವ–ಉದ್ಯೋಗ ಮೇಳ 2026: 5,000ಕ್ಕೂ ಹೆಚ್ಚು ಉದ್ಯೋಗಾವಕಾಶ
ಬೆಂಗಳೂರು: ಬಸವ ಜಯಂತಿಯ ಅಂಗವಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಶನ್ ಸಹಯೋಗದಲ್ಲಿ “ಯುವೋತ್ಸವ–ಉದ್ಯೋಗ ಮೇಳ 2026” ಅನ್ನು ಮಲ್ಲೇಶ್ವರಂನ ಎಸ್ಎಚ್ವಿಎನ್ಎಂ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕ C. N. Ashwath Narayan ತಿಳಿಸಿದ್ದಾರೆ.
ಮಲ್ಲೇಶ್ವರಂನ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ತತ್ವದಿಂದ ಪ್ರೇರಿತವಾಗಿ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಹೇಳಿದರು.
ಈ ಬಾರಿ ಬೆಳಗ್ಗೆ 8.30ರಿಂದ ಸಂಜೆ 4.30ರವರೆಗೆ “ಸರ್ವರಿಗೂ ಉದ್ಯೋಗ” ಎಂಬ ಧ್ಯೇಯವಾಕ್ಯದೊಂದಿಗೆ ಮೇಳ ನಡೆಯಲಿದೆ. ಭಾರತ್ ಕರಿಯರ್ ಕನೆಕ್ಟ್ ಸಂಸ್ಥೆ ಸಹಯೋಗ ನೀಡುತ್ತಿದೆ ಎಂದು ತಿಳಿಸಿದರು.
ಯುವ ಸಬಲೀಕರಣಕ್ಕಾಗಿ ವೃತ್ತಿ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯಮಶೀಲತಾ ಅಭಿವೃದ್ಧಿ, ಆರ್ಥಿಕ ಸೇರ್ಪಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂವಾದ, ನೇಮಕಾತಿ ಮತ್ತು ವೃತ್ತಿ ಅನ್ವೇಷಣೆಗೆ ಸಾಮಾನ್ಯ ವೇದಿಕೆ ಒದಗಿಸಲಾಗುತ್ತದೆ ಎಂದು ಹೇಳಿದರು.
ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ಸ್ ಹಾಗೂ ಸೇವಾ ಕ್ಷೇತ್ರಗಳ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 5,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಹಾಗೂ ಪ್ರಸ್ತುತ ಈ ಕೋರ್ಸ್ಗಳನ್ನು ಓದುತ್ತಿರುವವರು ಭಾಗವಹಿಸಬಹುದು.
ಕನಿಷ್ಠ 1,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ಧಿ, ಕೌಶಲ್ಯ ಉನ್ನತೀಕರಣ, ತರಬೇತಿ, ಸ್ವಯಂ ಉದ್ಯೋಗ ಹಾಗೂ ಉದ್ಯಮಶೀಲತೆ ಕುರಿತು ಮಾರ್ಗದರ್ಶನ ನೀಡುವುದು ಮೇಳದ ಮುಖ್ಯ ಉದ್ದೇಶವಾಗಿದೆ. ಮಲ್ಲೇಶ್ವರಂ ಮಾತ್ರವಲ್ಲದೆ ಬೆಂಗಳೂರಿನ ಎಲ್ಲ ಭಾಗಗಳಿಂದಲೂ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದು. ಭಾಗವಹಿಸುವವರಿಗೆ ಊಟೋಪಚಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಂಗವಿಕಲರಿಗೆ ವಿಶೇಷ ಉದ್ಯೋಗಾವಕಾಶಗಳ ಮಾಹಿತಿಯೂ ನೀಡಲಾಗುತ್ತದೆ.
ಕೇವಲ ಶಿಕ್ಷಣ ಸಾಕಾಗುವುದಿಲ್ಲ, ಕೌಶಲ್ಯವೂ ಅಗತ್ಯ ಎಂಬ ಅರಿವು ಮೂಡಿಸುವ ಉದ್ದೇಶದಿಂದ ಕರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸರಿಯಾದ ಶಿಕ್ಷಣದ ಆಯ್ಕೆ ಮತ್ತು ಜೀವನೋಪಾಯದ ದಿಕ್ಕಿನಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ Narendra Modi ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದು, ಯುವಕರನ್ನು ಉದ್ಯೋಗದಾತರಾಗಲು ಪ್ರೇರೇಪಿಸುತ್ತಿದೆ. ಅದಕ್ಕೆ ಪೂರಕವಾಗಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಮುಂದಿನ ಸೋಮವಾರದಿಂದ ಐದು ವಿಭಾಗಗಳಲ್ಲಿ ಆನ್ಲೈನ್ ಮೂಲಕ ಮಾಹಿತಿ ನೀಡಲಾಗುತ್ತದೆ. ಉದ್ಯೋಗ ಮೇಳದಂದು ಹ್ಯಾಕಥಾನ್ ಕೂಡ ನಡೆಯಲಿದ್ದು, ಖ್ಯಾತ ಉದ್ಯಮಿಗಳು ಮಾರ್ಗದರ್ಶನ ನೀಡಲಿದ್ದಾರೆ.
ಭಾರತ ಸರ್ಕಾರದ ವಿವಿಧ ಸಂಸ್ಥೆಗಳಾದ ಪ್ರಾದೇಶಿಕ ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯ, ಜನಶಿಕ್ಷಣ ಸಂಸ್ಥಾನ್, ಎನ್ಎಸ್ಡಿಐ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಹಾಗೂ ಅಂಚೆ ಇಲಾಖೆ ಸೇರಿದಂತೆ ವಿವಿಧ ಸ್ಟಾಲ್ಗಳು ಮೇಳದಲ್ಲಿ ಇರಲಿವೆ ಎಂದು ತಿಳಿಸಿದರು.
