ಬೆಂಗಳೂರು:
ಪಾದಚಾರಿ ಮಾರ್ಗಗಳಲ್ಲಿ ಅಪಯಕಾರಿ ಸ್ಥಿತಿಯಲ್ಲಿರುವ ಟಿಸಿಗಳ ಸ್ಥಳಾಂತರ ಜೊತೆಗೆ ಭೂಗತ ಟ್ರಾನ್ಸ್ ಫಾರ್ಮರ್‌ಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದರು.
ಮಲ್ಲೇಶ್ವರಂದಲ್ಲಿ ಬೆಸ್ಕಾಂ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಿರ್ಮಿಸಿರುವ 500 ಕೆವಿಎ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಮಂಗಳವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಇದು ದೇಶದ ಮೊದಲ ಭೂಗತ ಪರಿವರ್ತಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಭೂಗತ ಪರಿವರ್ತಕ ಕೇಂದ್ರಗಳನ್ನು ನಿರ್ಮಿಸುವ ಕುರಿತು ಈಗಾಗಲೇ ಯೋಜನೆಯನ್ನು ರೂಪಿಸಿಕೊಂಡಿದ್ದು, ಪ್ರತಿ ಭೂಗತ ಟ್ರಾನ್ಸ್ ಫಾರ್ಮರ್ ಗಳ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ ವ್ಯಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಭೂಗತ ಉಪ ಕೇಂದ್ರಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಮೇಲ್ಮಾರ್ಗದ ಹೆಚ್.ಟಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಪರಿವರ್ತಿಸುವ ಯೋಜನೆಯನ್ನು ಬೆಸ್ಕಾಂ ಈಗಾಗಲೇ ಕಾರ್ಯಗತಗೊಳಿಸಿದೆ. ನೆಲದಡಿಯಲ್ಲಿ ಕೇಬಲ್ ಹಾಗೂ ವಿದ್ಯುತ್ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ ಎಂದರು.
Today I inaugurated a first of its kind 𝐔𝐧𝐝𝐞𝐫𝐠𝐫𝐨𝐮𝐧𝐝 𝐃𝐢𝐬𝐭𝐫𝐢𝐛𝐮𝐭𝐢𝐨𝐧 𝐓𝐫𝐚𝐧𝐬𝐟𝐨𝐫𝐦𝐞𝐫 𝐂𝐞𝐧𝐭𝐫𝐞 (𝟱𝟬𝟬𝗸𝗩𝗔 𝘁𝗿𝗮𝗻𝘀𝗳𝗼𝗿𝗺𝗲𝗿 𝘄𝗶𝘁𝗵 𝟴𝗪𝗮𝘆 𝗦𝗼𝗹𝗶𝗱 𝘀𝘁𝗮𝘁𝗲 𝗥𝗠𝗨) in #Malleshwaram ward. This is an exceptional achievement for us since… pic.twitter.com/DutpgKTTfr
— KJ George (@thekjgeorge) September 5, 2023
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾತನಾಡಿ, ಸಾರ್ವಜನಿಕರ ಸುರಕ್ಷತೆಯನ್ನು ಕೇಂದ್ರಕರಿಸಿ ಈ ಕಾಮಗಾರಿಯ ಕುರಿತು 2022 ರಲ್ಲೇ ಇಂಧನ ಇಲಾಖೆಯೊಂದಿಗೆ ಚರ್ಚಿಸಲಾಗಿತ್ತು. ಅನುದಾನದ ಕೊರತೆ ಹಾಗೂ ನಾನಾ ಕಾರಣಗಳಿಂದ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಲ್ಲೇಶ್ವರಂನಲ್ಲಿ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.
ಭೂಗತ ಟಿಸಿ ವಿವರ: ಬೆಸ್ಕಾಂ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಒಟ್ಟು 1.97 ಕೋಟಿ ವೆಚ್ಚದಲ್ಲಿ ಈ ಪರಿವರ್ತಕ ಕೇಂದ್ರವನ್ನು (ಟಿಸಿ) ಮಲ್ಲೇಶ್ವರಂನ 15ನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದಡಿಯಲ್ಲಿ ನಿರ್ಮಿಸಲಾಗಿದ್ದು, ಈ ಕೇಂದ್ರದ ಉದ್ದ 14 ಮೀಟರ್, ಅಗಲ 5 ಮೀಟರ್ ಹಾಗೂ ಆಳ 4 ಮೀಟರ್‌ಗಳಿಷ್ಟಿದೆ.
ಬೆಸ್ಕಾಂ 1.33 ಕೋಟಿ ರೂ. ವೆಚ್ಚದಲ್ಲಿ 500 ಕೆವಿಎ ತೈಲರಹಿತ ಪರಿವರ್ತಕ, 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯುನಿಟ್, 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ, 2 ಕೆವಿಎ ಯುಪಿಎಸ್, 1 ಹೆಚ್.ಪಿ ವಾಟರ್ ಪಂಪ್ (ಸ್ವಯಂಚಾಲಿತ), ಹವಾನಿಯಂತ್ರಣ ವ್ಯವಸ್ಥೆ (ಸ್ವಯಾಂಚಾಲಿತ), ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಭೂಗತ ಪರಿವರ್ತಕ ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಅಳವಡಿಸಿದೆ. ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಗಳ ಅನುದಾನವನ್ನು ಒದಗಿಸಿದೆ.
ವಿತರಣ ಪರಿವರ್ತಕಗಳು, ರಿಂಗ್ ಮೇನ್ ಯೂನಿಟ್’ಗಳು, ಫಿಡರ್ ಪಿಲ್ಲರ್ ಬಾಕ್ಸ್ ಗಳು ಸೇರಿದಂತೆ ಸಂಪೂರ್ಣ ವ್ಯವಸ್ಥೆಯನ್ನು ಭೂಗತವಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವುದರ ವಿದ್ಯುತ್ ಪೂರೈಕೆ ನಷ್ಟವನ್ನು ತಗ್ಗಿಸಬಹುದಾಗಿದೆ. ಜತೆಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿದೆ.
ಸಮಾರಂಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಭೂಗತ ಪರಿವರ್ತಕ ಕೇಂದ್ರದ ಕುರಿತು ಮಾಹಿತಿ ನೀಡಿದರು. ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಅವರು ಸ್ವಾಗತಿಸಿ ಯೋಜನೆ ವೆಚ್ಚದ ಕುರಿತು ವಿವರಿಸಿದರು.
ಬೆಸ್ಕಾಂ ನಿರ್ದೇಶಕರು ( ಹಣಕಾಸು) ದರ್ಶನ್.ಜೆ, ನಿರ್ದೇಶಕರು (ತಾಂತ್ರಿಕ) ರಮೇಶ್ ಹೆಚ್ .ಜೆ., ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬಿಬಿಎಂಪಿ ವಲಯ ಆಯುಕ್ತರಾದ ಡಾ.ದೀಪಕ್, ಬೆವಿಕಂ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.