ಬೆಂಗಳೂರು: ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಗೆ (Betting racket) ಕಡಿವಾಣ ಹಾಕಲು ಕಠಿಣ ಕಾನೂನು ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ರವಿಕುಮಾರ್ ಗೌಡ ಗಣಿಗ, ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ನಿಷೇಧಿಸುವ ಕುರಿತು ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಬೆಟ್ಟಿಂಗ್ ದಂಧೆ ಕೇವಲ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಹರಡಿಕೊಂಡಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಚರ್ಚಿಸಿ ಕಠಿಣ ಕಾಯ್ದೆ ರೂಪಿಸಬೇಕಾದ ಅಗತ್ಯತೆ ಇದೆ. ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾವು ರಾಜ್ಯಕ್ಕೆ ಸೀಮಿತವಾಗಿ ಕಠಿಣ ಕಾನೂನು ರೂಪಿಸುತ್ತೇವೆ ಎಂದು ಅವರು ಹೇಳಿದರು.