ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಬಳಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಯೋಜನೆ ವಿರುದ್ಧ ರೈತರು ಬಿರುಸಿನ ಹೋರಾಟ ಆರಂಭಿಸಿದ್ದಾರೆ. “ಜಮೀನು ಕೊಡೋದಕ್ಕಿಂತ ಪ್ರಾಣ ಬಿಟ್ಟರೂ ಸರಿ” ಎಂದು ಘೋಷಿಸಿದ ರೈತರು ಅಹೋರಾತ್ರಿ ಧರಣಿ ನಡೆಸಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಬೈರಮಂಗಲ ಗ್ರಾಮದಲ್ಲಿ ನೂರಾರು ರೈತರು ಬೀದಿಗಿಳಿದು ಪ್ರತಿಭಟಿಸಿದರು. ಈ ಹೋರಾಟಕ್ಕೆ ಈಗ ಜೆಡಿಎಸ್ ಬೆಂಬಲ ನೀಡಿದ್ದು, ಬಿಜೆಪಿ ಕೂಡ ಈಗಾಗಲೇ ಬೆಂಬಲ ವ್ಯಕ್ತಪಡಿಸಿತ್ತು. ಜೆಡಿಎಸ್ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡು “ಯೋಜನೆ ಮುಂದುವರಿದರೆ ಬೆಂಗಳೂರಿನತ್ತ ಪಾದಯಾತ್ರೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು. ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಇಂದು ತೊಡೆ ತಟ್ಟುತ್ತೀರಾ, ನಾಳೆ ಅದನ್ನು ಮುರಿಯುವ ಶಕ್ತಿ ರೈತರಿಗೆ ಇದೆ” ಎಂದು ಘೋಷಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿ, “ನಿಮ್ಮ ಆಟ ಗೊತ್ತಿದೆ. ಡಿಕೆ ಶಿವಕುಮಾರ್ ಜೈಲಿಗೆ ಹೋಗುವ ದಿನಗಳು ದೂರದಲ್ಲಿಲ್ಲ. ಜೆಡಿಎಸ್ ಮುಗಿಯೋದಿಲ್ಲ, ನಮ್ಮ ರೈತರ ಬೆಂಬಲ ಮತ್ತು ದೇವರ ಆಶೀರ್ವಾದ ನಮ್ಮ ಜೊತೆ ಇದೆ” ಎಂದರು.

ರಾಜ್ಯ ಸರ್ಕಾರವು ಈ ವರ್ಷದ ಮಾರ್ಚ್ನಲ್ಲಿ 2000 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ ರೈತರು ಭೂಮಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಈ ನಡುವೆ, ರಾಮನಗರ ಡಿಸಿ ಕಚೇರಿ ಬಳಿ ನಡೆದ ಧರಣಿಯಲ್ಲಿ ರೈತರು ಮತ್ತು ಡಿಕೆ ಶಿವಕುಮಾರ್ ನಡುವೆ ವಾಕ್ಸಮರ ಸಂಭವಿಸಿತು.
ಈ ಯೋಜನೆಯ ಮೂಲವನ್ನು 2006ರಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಪ್ರಾರಂಭಿಸಿದ್ದರು. ನಂತರ 2016ರಲ್ಲಿ ಸಿದ್ದರಾಮಯ್ಯ 38 ಹಳ್ಳಿಗಳನ್ನು ಸ್ಮಾರ್ಟ್ ಸಿಟಿ ಯೋಜನಾ ಪ್ರದೇಶ ಎಂದು ಘೋಷಿಸಿದ್ದರು. ಈಗ ಈ ಯೋಜನೆ ಮತ್ತೆ ಮುಂದುವರಿಯುತ್ತಿದ್ದರೂ, ರೈತರ ಹೋರಾಟ ಮತ್ತು ರಾಜಕೀಯ ವಾಗ್ವಾದದಿಂದ ಸರ್ಕಾರದ ಭವಿಷ್ಯ ಕ್ರಮವನ್ನು ಕಾದು ನೋಡಬೇಕಾಗಿದೆ.
