ಬೀದರ್:
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಮಸೀದಿಯೊಂದರ ಮೇಲೆ ಭಗವಾಧ್ವಜ ಹಾರಿಸಿ ನಾಪತ್ತೆಯಾಗಿದ್ದ ನಾಲ್ವರು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಬಸವಕಲ್ಯಾಣ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಹೊರವಲಯದ ಜಾಮಿಯಾ ಮಸೀದಿ ಮೇಲೆ ಸೆಪ್ಟೆಂಬರ್ 20 ರಂದು ತಡರಾತ್ರಿ ಭಾಗವಾಧ್ವಜ ಹಾರಿಸಿ ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟು ಮಾಡಿದ್ದರು.
ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಡಿವೈಎಸ್ಪಿ ನ್ಯಾಮೇಗೌಡ , ಬಸವಕಲ್ಯಾಣ ಗ್ರಾಮೀಣ ಪೋಲಿಸ್ ಠಾಣೆ ಪಿಎಸ್ಐ ವಸೀಮ್ ಪಟೇಲ್ ನೇತೃತ್ವದ ಪೊಲೀಸ್ ತಂಡ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿ, ಮಸೀದಿ ಮೇಲೆ ಹಾರಿಸಿದ ಭಾಗವಾಧ್ವಜ ತೆರವುಗೊಳಿಸಿ ಕಿಡಿಗೇಡಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದರು.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಸ್.ಪಿ. ಚನ್ನಬಸವಣ್ಣ ಎಸ್.ಎಲ್., ಡಿವೈಎಸ್ ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೋಲಿಸ್ ಠಾಣೆ ಪಿಎಸ್ಐ ವಸೀಮ್ ಪಟೇಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ. ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದ ಅದೇ ಗ್ರಾಮದ ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಅಭಿಷೇಕ, ಕಲ್ಯಾಣಿ, ಸುಶೀಲ್ ಹಾಗೂ ವೀರೇಶ ಬಿರಾದಾರ ಎಂದು ಗುರ್ತಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.