ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಿ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಘಟಕಗಳ ಭೂ ಪರಿವರ್ತನೆಗೆ ಸ್ವಯಂ ಚಾಲಿತ ತಂತ್ರಾಂಶವನ್ನು ಕರ್ನಾಟಕ ಸರ್ಕಾರ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದೆ.
ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನೂತನ ತಂತ್ರಾಂಶವನ್ನು ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, “ನೀತಿ-ನಿಯಮಗಳನ್ನು ಸರಳಗೊಳಿಸಿ ನೈಜ ಹೂಡಿಕೆದಾರರಿಗೆ ನೆರವಾಗುವುದು ಸರ್ಕಾರದ ಗುರಿ. ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಮೂಲಕ ಮಧ್ಯವರ್ತಿಗಳ ಹಸ್ತಕ್ಷೇಪ ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ” ಎಂದು ಹೇಳಿದರು.
6 ತಿಂಗಳ ವಿಳಂಬಕ್ಕೆ ಅಂತ್ಯ
ಇಲ್ಲಿವರೆಗೆ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗೆ ಭೂ ಪರಿವರ್ತನೆ ಕಡ್ಡಾಯವಾಗಿದ್ದು, ಈ ಪ್ರಕ್ರಿಯೆಗೆ ಕನಿಷ್ಠ 6 ತಿಂಗಳು ಸಮಯ ಬೇಕಾಗುತ್ತಿತ್ತು. ಇದರಿಂದ ಮಧ್ಯವರ್ತಿಗಳಿಗೆ ಅವಕಾಶ ದೊರಕುತ್ತಿದ್ದು, ಭ್ರಷ್ಟಾಚಾರವೂ ಹೆಚ್ಚಾಗಿತ್ತು.
“ಯಾರು ಲಾಭ ಪಡೆದರು ಎನ್ನುವುದು ಗೊತ್ತಿಲ್ಲ. ಆದರೆ ಸರ್ಕಾರಕ್ಕೆ ಮಾತ್ರ ಕೆಟ್ಟ ಹೆಸರು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳಿಗೆ ಬ್ರೇಕ್ ಹಾಕಿ, ನೈಜ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಸ್ವಯಂ ಚಾಲಿತ ಭೂ ಪರಿವರ್ತನೆ ತಂತ್ರಾಂಶ ಜಾರಿಗೆ ತರಲಾಗಿದೆ. ಇದು ದೇಶದಲ್ಲೇ ಮಾದರಿ ವ್ಯವಸ್ಥೆಯಾಗಲಿದೆ” ಎಂದು ಸಚಿವರು ತಿಳಿಸಿದರು.
ಇಂಧನ ಭದ್ರತೆ = ಆರ್ಥಿಕ ಭದ್ರತೆ
“ಇಂಧನ ಭದ್ರತೆ ಇಲ್ಲದ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ತಂತ್ರಜ್ಞಾನ, ಜ್ಞಾನ ಆಧಾರಿತ ಆರ್ಥಿಕತೆ ಸಹ ವಿದ್ಯುತ್ ಮತ್ತು ಇಂಧನದ ಮೇಲೆ ಅವಲಂಬಿತವಾಗಿದೆ. ನೀರಿನ ಭದ್ರತೆಯಷ್ಟೇ ಇಂಧನ ಭದ್ರತೆಯೂ ಬಡವರ ಬದುಕಿಗೆ ಅಗತ್ಯ,” ಎಂದು ಕೃಷ್ಣ ಬೈರೇಗೌಡ ಹೇಳಿದರು.
ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಲ್ಲಿದ್ದಲು ಸೇರಿದಂತೆ ಜೀವಾಶ್ಮ ಇಂಧನಗಳ ಅವಲಂಬನೆ ಕಡಿಮೆ ಮಾಡುವ ಭರವಸೆ ನೀಡಿದೆ, ಇದನ್ನು ಸಾಕಾರಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆ ಅಗತ್ಯವಿದೆ ಎಂದು ಅವರು ಹೇಳಿದರು.
500 ಗಿಗಾವ್ಯಾಟ್ ಗುರಿ – ಕರ್ನಾಟಕದ ಪಾತ್ರ ಮಹತ್ವದದು
ದೇಶಾದ್ಯಂತ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇದ್ದು, ಪ್ರಸ್ತುತ 300 ಗಿಗಾವ್ಯಾಟ್ ಗಿಂತ ಸ್ವಲ್ಪ ಹೆಚ್ಚು ಮಾತ್ರ ಉತ್ಪಾದನೆಯಾಗುತ್ತಿದೆ.
ಈ ಪೈಕಿ ಕರ್ನಾಟಕವೇ 12–13% ವಿದ್ಯುತ್ ಪೂರೈಕೆ ಮಾಡುತ್ತಿದೆ. ಉಳಿದ 200 ಗಿಗಾವ್ಯಾಟ್ ಉತ್ಪಾದನೆಗೆ ದೇಶಾದ್ಯಂತ ಕನಿಷ್ಠ 8 ಲಕ್ಷ ಎಕರೆ ಭೂಮಿ ಅಗತ್ಯವಿದೆ. ಕರ್ನಾಟಕದಲ್ಲಿ ಮಾತ್ರವೇ 40–50 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಇದಕ್ಕೆ ಸುಮಾರು 1 ಲಕ್ಷ ಎಕರೆ ಭೂಮಿ ಬೇಕಾಗಬಹುದು ಎಂದು ಸಚಿವರು ವಿವರಿಸಿದರು.
“ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಇಂಧನ ಇಲಾಖೆ ಒಟ್ಟಾಗಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇದರ ಫಲವಾಗಿ ಕರ್ನಾಟಕ ಇಡೀ ದೇಶದಲ್ಲೇ ವಿದ್ಯುತ್ ಉತ್ಪಾದನೆಯಲ್ಲಿ ಅತ್ಯಂತ ಸ್ವಾವಲಂಬಿ ರಾಜ್ಯವಾಗಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವೀಕರಿಸಬಹುದಾದ ಇಂಧನದಲ್ಲಿ ಕರ್ನಾಟಕವೇ ನಂಬರ್ 1
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕವೇ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
“ಗುಜರಾತ್ ಹಾಗೂ ರಾಜಸ್ಥಾನ ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ ಎಂಬ ಅಭಿಪ್ರಾಯವಿದೆ. ಆದರೆ, ಅವರಲ್ಲಿ ಶೇ.20–25ರಷ್ಟು ಭೂಮಿ ಕೃಷಿಗೆ ಯೋಗ್ಯವಲ್ಲ. ಮರುಭೂಮಿಯಲ್ಲಿ ಘಟಕ ಸ್ಥಾಪಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಪ್ರತಿಯೊಂದು ಇಂಚೂ ಕೃಷಿಗೆ ಯೋಗ್ಯವಾದ ಭೂಮಿಯಲ್ಲೇ ಘಟಕ ಸ್ಥಾಪಿಸಿ ದೇಶದ ಒಟ್ಟು ಉತ್ಪಾದನೆಗೆ ಗಣನೀಯ ಕೊಡುಗೆ ನೀಡುತ್ತಿದ್ದೇವೆ” ಎಂದು ಅವರು ಹೇಳಿದರು.
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತೆ ಮೀನಾ ನಾಗರಾಜ್, ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದ ಹಲವು ಹೂಡಿಕೆದಾರರು ಉಪಸ್ಥಿತರಿದ್ದರು.
