ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಇದರೊಂದಿಗೆ ಇಡೀ ದೇಶಾದ್ಯಂತ ಹೊಸ ಶಕ್ತಿಯ ಉದಯವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷಕ್ಕೆ ಜಯಭೇರಿ ದೊರೆತ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಅಹಂಕಾರ ಹೆಚ್ಚಿನ ಕಾಲ ಉಳಿಯಲ್ಲ. ಇದು ಪ್ರಜಾಪ್ರಭುತ್ವ ಮತ್ತು ಜನರ ಮನವಿಗಳನ್ನು ಕೇಳಬೇಕಾಗಿದೆ. ನಮಗೆ ಸರಿಯಾದ ದಾರಿ ತೋರಿಸುವ ಜನರ ಮುಂದೆ ತಲೆ ಬಾಗಬೇಕು, ಇದು ಯಾರ ಜಯವಲ್ಲ, ರಾಜ್ಯದ ಜನತೆಯ ಗೆಲುವು. ಜನತೆ ನಿರ್ಧರಿಸಿ ಆಯ್ಕೆ ಮಾಡಿದ್ದಾರೆ. ಅದಕ್ಕಾಗಿಯೇ 36 ವರ್ಷಗಳ ನಂತರ ನಮಗೆ 136 ಸ್ಥಾನಗಳು ಸಿಕ್ಕಿವೆ ಎಂದರು.
ಒಗ್ಗಟ್ಟಾಗಿದ್ದಾಗ ಮಾತ್ರ ಯುದ್ಧವನ್ನು ಗೆಲ್ಲಬಹುದು, ನಂತರ ಮಾತ್ರ ದೇಶವನ್ನು ಉಳಿಸಬಹುದು ಎಂದು ಹೇಳಿದ ಖರ್ಗೆ, ಎಲ್ಲೆಡೆ ಪ್ರಜಾಪ್ರಭುತ್ವ ಸರ್ಕಾರ ಬೇಕಾದರೆ ನಾವು ಮುಂಬರುವ ಚುನಾವಣೆಯಲ್ಲಿ ದೊಡ್ಡ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಕರ್ನಾಟಕ ಇತಿಹಾಸ ಸೃಷ್ಟಿಸಿದೆ. ಕರ್ನಾಟಕ ಜನತೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಪ್ರಜಾಪ್ರಭುತ್ವಕ್ಕೆ ಹೊಸ ಬದುಕನ್ನು ತೋರಿಸಿದೆ. ಇದು ಪ್ರತಿಯೊಬ್ಬ ಕನ್ನಡಿಗನ ಗೆಲುವು.
ಪ್ರಜಾಪ್ರಭುತ್ವ ಉಳಿಸಲು ಕರ್ನಾಟಕ ಹೊಸ ಮಂತ್ರ ನೀಡಿದೆ. ಇದು ದೇಶಾದ್ಯಂತ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಮಾರ್ಗವಾಗಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಪ್ರಧಾನಿ ಹೇಳಿದ್ದರು. ಆದರೆ ಕರ್ನಾಟಕದ ಜನರು ‘ಬಿಜೆಪಿ ಮುಕ್ತ ಭಾರತ’ ಎಂದು ಖಚಿತಪಡಿಸಿದ್ದಾರೆ. ಜನರು ಪ್ರೀತಿಯ ಅಂಗಡಿ ತೆರೆದು, ದ್ವೇಷದ ಅಂಗಡಿಗಳನ್ನು ಮುಚ್ಚಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಇದು ಗೆಲುವಲ್ಲ, ಭ್ರಷ್ಟಾಚಾರ ವಿರುದ್ಧದ ಗೆಲುವಾಗಿದೆ. ಮೂರೂವರೆ ವರ್ಷದ ಇದ್ದ ಕರ್ನಾಟಕಕ್ಕೆ ಹಿಡಿದ ಗ್ರಹಣ ಇಂದು ಬಿಟ್ಟಿದೆ. ಇದು ರಾಜ್ಯದ ಜನರ ಗೆಲುವಾಗಿದೆ. ಗ್ರಹಣ ಬಿಡಿಸಿದ ಜನರಿಗೆ ಧನ್ಯವಾದಗಳು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇಂದು ಆರು ಕೋಟಿ ಜನರ ಗೆಲುವಾಗಿದೆ. ಜನತೆ ಐದು ವರ್ಷ ನೀಡಿರುವ ಅಧಿಕಾರವನ್ನು ಉಳಿಸಿಕೊಳ್ಳಬೇಕು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.