ಬೆಂಗಳೂರು: ಹಿಂದೆ ಸರ್ಕಾರಿ ಸ್ವಾಮ್ಯದ ಎನ್ಜಿಇಎಫ್ ಕಾರ್ಖಾನೆಗೆ ಸೇರಿದ ಬೈಯ್ಯಪ್ಪನಹಳ್ಳಿ ಜಾಗದಲ್ಲಿ, ಒಟ್ಟು 105 ಎಕರೆ ಪೈಕಿ 65 ಎಕರೆ ಪ್ರದೇಶದಲ್ಲಿ ಭಾರೀ ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಈ ವೃಕ್ಷೋದ್ಯಾನದ ಮೊದಲ ಹಂತವನ್ನು ಮಾರ್ಚ್ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದರು.
ಶನಿವಾರ ಎನ್ಜಿಇಎಫ್ ಆವರಣಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಈ ಯೋಜನೆಯನ್ನು ಹಂತ–1, 1ಎ, 1ಬಿ ಮತ್ತು ಹಂತ–2 ಎಂಬ ನಾಲ್ಕು ಹಂತಗಳಲ್ಲಿ ₹37.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಹಂತ–1ಎ ಕಾಮಗಾರಿಗಳು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಹಂತ–1ಕ್ಕೆ ಅಗತ್ಯವಿದ್ದ ₹11.50 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಜಾಗದಲ್ಲಿ ಈಗಾಗಲೇ 8,500ಕ್ಕೂ ಹೆಚ್ಚು ಬಗೆಯ ಮರಗಳಿದ್ದು, ಅವುಗಳ ವೈಜ್ಞಾನಿಕ ಹೆಸರುಗಳನ್ನು ಪ್ರದರ್ಶಿಸಲಾಗಿದೆ. “ಇಲ್ಲಿ ಒಂದೇ ಒಂದು ಮರವನ್ನು ಕೂಡ ನಾವು ಕಡಿತಗೊಳಿಸುವುದಿಲ್ಲ. ನೀಲಗಿರಿ ಜಾತಿಯ ಮರಗಳ ಬಗ್ಗೆ ಮಾತ್ರ ವೈಜ್ಞಾನಿಕ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಪಾಟೀಲ ಸ್ಪಷ್ಟಪಡಿಸಿದರು.
ಎನ್ಜಿಇಎಫ್ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡಗಳು ಹಾಗೂ ಕೈಗಾರಿಕಾ ಶೆಡ್ಗಳು ಸುಭದ್ರವಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ಪರಿಶೀಲನೆ ನಡೆಸಿ ದೃಢಪಡಿಸಿದ್ದಾರೆ. ಆದ್ದರಿಂದ ಈ ಕಟ್ಟಡಗಳನ್ನು ಕೆಡವದೆ, ನವೀಕರಿಸಿ ಹೊಸ ಬಳಕೆಗೆ ತರುವ ಯೋಜನೆ ಇದೆ ಎಂದು ಸಚಿವರು ತಿಳಿಸಿದರು.

ಕಾಂಪೌಂಡ್ ಹೊರಗಿರುವ 4.5 ಎಕರೆ ಜಾಗದಲ್ಲಿ 5,000 ರಿಂದ 7,000 ವಾಹನಗಳಿಗೆ ಅನುಕೂಲವಾಗುವ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು. ಜೊತೆಗೆ, ಈಗಿರುವ ಎರಡು ಎಲೆಕ್ಟ್ರಿಕ್ ಮೋಟಾರ್ ಶೆಡ್ಗಳಲ್ಲಿ ಕನಿಷ್ಠ 15,000 ಆಸನ ಸಾಮರ್ಥ್ಯದ ಎರಡು ಕನ್ವೆನ್ಶನ್ ಸೆಂಟರ್ಗಳು ನಿರ್ಮಾಣವಾಗಲಿದ್ದು, ಇಲ್ಲಿ ಸಮಾವೇಶ, ಸಮ್ಮೇಳನ, ಕಾರ್ಯಕ್ರಮ, ವಾರ್ಷಿಕೋತ್ಸವಗಳು ನಡೆಯಲಿವೆ.
ಇದರ ಜೊತೆಗೆ, ಸರ್ಕಾರದ ಕಿಟ್ಸ್ ಸಂಸ್ಥೆ ಮೂಲಕ ‘ಇನ್ನೋವರ್ಸ್’ ಎಂಬ ನವೋದ್ಯಮ ಪರಿಪೋಷಣಾ ಕೇಂದ್ರ ಸ್ಥಾಪಿಸಲಾಗುತ್ತದೆ. ಐಟಿ–ಬಿಟಿ ಇಲಾಖೆ ₹100 ಕೋಟಿ ವೆಚ್ಚದಲ್ಲಿ ‘ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂ’ ಅಭಿವೃದ್ಧಿಪಡಿಸಲಿದೆ. ವೃಕ್ಷೋದ್ಯಾನದಲ್ಲಿ ಜಾಗತಿಕ ಮಟ್ಟದ ಶಿಲ್ಪಕಲೋದ್ಯಾನ, ಎನ್ಜಿಇಎಫ್ ವಸ್ತು ಸಂಗ್ರಹಾಲಯ, ಹಾಗೂ ಸುಗಮ ಸೌಲಭ್ಯಗಳೊಂದಿಗೆ ಓಪನ್ ಆ್ಯಂಫಿ ಥಿಯೇಟರ್ ನಿರ್ಮಿಸಲಾಗುತ್ತದೆ.
“ಈ ಆವರಣದಲ್ಲಿ ಯಾವುದೇ ರೀತಿಯ ಮಾಲ್ ನಿರ್ಮಿಸುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು. ಇದು ನಗರದ ಪೂರ್ವ ಭಾಗದ ಜನರಿಗೆ ದೊಡ್ಡ ಹಸಿರು ವಿಶ್ರಾಂತಿ ತಾಣವಾಗಲಿದ್ದು, ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ಗಿಂತಲೂ ಉತ್ತಮ ಹಸಿರು ಕೇಂದ್ರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಪ್ರವೇಶ ದ್ವಾರಕ್ಕೆ ಅಗತ್ಯವಿರುವ ಸ್ವಲ್ಪ ಜಾಗ ಮಾತ್ರ ನಮ್ಮ ಮೆಟ್ರೋ ಅಧೀನದಲ್ಲಿದ್ದು, ಅದರ ಬಗ್ಗೆ ಚರ್ಚಿಸಿ ಜಾಗ ಪಡೆದುಕೊಳ್ಳಲಾಗುವುದು ಎಂದರು.
“ನಾನು ವಿಜಯಪುರದಲ್ಲಿ ವೃಕ್ಷಥಾನ್ ನಡೆಸುವ ಮೂಲಕ 10 ಕೋಟಿ ಗಿಡಮರಗಳನ್ನು ಬೆಳೆಸಲು ಮುಂದಾಗಿರುವವನು. ಹಸಿರುಸಿರಿಯ ಮೌಲ್ಯ ನನಗೆ ಚೆನ್ನಾಗಿ ಗೊತ್ತು. ಎನ್ಜಿಇಎಫ್ ಜಾಗದಲ್ಲಿರುವ ಒಂದೇ ಒಂದು ಮರವನ್ನು ಕೂಡ ಕಡಿತಗೊಳಿಸುವುದಿಲ್ಲ. ಇದನ್ನು ಅಂತಾರಾಷ್ಟ್ರೀಯ ಮಟ್ಟದ ವೃಕ್ಷೋದ್ಯಾನವಾಗಿ ರೂಪಿಸುವುದೇ ನನ್ನ ಗುರಿ,” ಎಂದು ಎಂ.ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಐಟಿ–ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಹಾಗೂ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.
