ಬೆಂಗಳೂರು: ಬಿಕ್ಲು ಶಿವ ಯಾನೆ ರೌಡಿಶೀಟರ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಜಗದೀಶ್ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಪೂರ್ವ ವಿಭಾಗದ ಭಾರತೀನಗರ ಠಾಣೆ ಪೊಲೀಸರು ಅವನ ವಿರುದ್ಧ ಲುಕ್ ಔಟ್ ಸಕ್ಯುಲರ್ (LOC) ಜಾರಿಗೊಳಿಸಿದ್ದಾರೆ.
ಜುಲೈ 15ರಂದು ಬಿಕ್ಲು ಶಿವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗಾಗಲೇ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿಸುತ್ತಿರುವುದಾಗಿ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.
ಆದರೆ ಪ್ರಕರಣದ ಪ್ರಮುಖ ಸಂಚುಕೋರ ಜಗದೀಶ್ ಈಗ ತನಿಖೆ ತಂಡದ ಕೈಗೆ ಸಿಗದೆ ಪರಾರಿಯಾಗಿದ್ದು, ಆತನ ಪತ್ತೆಗಾಗಿ ವಿಶೇಷ ಬಲಾ ಬಳಸಿದರೂ ಯಾವುದೇ ಸುಳಿವು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಆತನ ಸ್ಥಿತಿ ಹಾಗೂ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಲು ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಅಂತಾರಾಷ್ಟ್ರೀಯ ಗಡಿ ಪ್ರದೇಶಗಳು ಹಾಗೂ ಬಂದರುಗಳಿಗೆ ಲುಕ್ ಔಟ್ ನೋಟಿಸ್ ನೀಡಲಾಗಿದೆ.
ಡಿಸಿಪಿ ದೇವರಾಜ್ ಅವರು ನೀಡಿದ ಮಾಹಿತಿ ಪ್ರಕಾರ, ಜಗದೀಶ್ ಕೊಲೆಗಂದಿಗೂ ಮುಂಚೆಯೇ ನಾಪತ್ತೆಯಾಗಿದ್ದು, ಬೆಂಗಳೂರಿನಿಂದ ಕೇರಳ, ತಮಿಳುನಾಡು ಮೂಲಕ ಉತ್ತರಾಖಂಡ್‌ಗೆ ತೆರಳಿ ಅಲ್ಲಿಂದ ವಿದೇಶಕ್ಕೆ ತಪ್ಪಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಇಮಿಗ್ರೇಷನ್ ಹಾಗೂ ಗಡಿಭದ್ರತಾ ದಳಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ನೀಡಲಾಗಿದೆ. ಜಗದೀಶ್ ನ ಬಂಧನಕ್ಕಾಗಿ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳು ಕಾರ್ಯನಿರತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.