ಬೆಂಗಳೂರು, ಆಗಸ್ಟ್ 21(ಕರ್ನಾಟಕ ವಾರ್ತೆ): ಬೆಳಗಾವಿ ನಗರದಲ್ಲಿನ ಬಿಮ್ಸ್ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಈಗಾಗಲೇ ಪ್ರಾರಂಭವಾಗಿದ್ದು ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ತಿಳಿಸಿದರು.
ಇಂದು ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಆಸೀಫ್ ಸೇಠ್ (ರಾಜು) ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಈ ಆಸ್ಪತ್ರೆಗೆ ಒಟ್ಟು 23 ವೈದ್ಯರನ್ನು, 111 ಬೋಧಕೇತರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. 90 ಸ್ವಚ್ಛತಾ ಸಿಬ್ಬಂದಿಗಳು ಹಾಗೂ 20 ಭದ್ರತಾ ಸಿಬ್ಬಂದಿಗಳನ್ನು ಸೇವಾ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ. ಚಿಕಿತ್ಸೆಗೆ ಅವಶ್ಯಕ ಸಾಮಗ್ರಿಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.