ಬೆಂಗಳೂರು:
ಭಾರತದ ಸಾರ್ವಭೌಮತ್ವದ ವಿರುದ್ಧ ಮಾತನಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.
ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಕೇಂದ್ರ ಸಚಿವೆ ಹಾಗೂ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಕು.ಶೋಭಾ ಕರಂದ್ಲಾಜೆ ಮಾಧ್ಯಮಗಳೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಮೊನ್ನೆ ಸೋನಿಯಾಗಾಂಧಿಯವರು ಕರ್ನಾಟಕ ಸಾರ್ವಭೌಮತ್ವದ ವಿರುದ್ಧ ಮಾತನ್ನು ಆಡಿದ್ದಾರೆ. ದೇಶದ ಏಕತೆ, ಅಖಂಡತೆ, ಭದ್ರತೆ, ಸಾರ್ವಭೌಮತ್ವದ ಮಾತನ್ನು ಬಿಜೆಪಿ ಹೇಳುತ್ತದೆ.
ಯಾವ ಕಾಶ್ಮೀರ, ಜೆಎನ್‍ಯು ನಲ್ಲಿ ತುಕ್‍ಡೆ, ತುಕ್‍ಡೆ ಗ್ಯಾಂಗ್ ಭಾರತದ, ದೇಶದ ವಿಭಜನೆ ಮಾಡುವ ಮಾತು ಹೇಳಿತ್ತೋ ಅದೇ ಮಾತನ್ನು ಕರ್ನಾಟಕ ನೆಲದಲ್ಲಿ ಸೋನಿಯಾಗಾಂಧಿ ಆಡಿದ್ದಾರೆ ಎಂದು ಆಕ್ಷೇಪಿಸಿದರು.
ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಗೀತೆ ರಚಿಸಿದ ಕುವೆಂಪು, ಯುದ್ಧ ಭೂಮಿಯಲ್ಲಿ ಹೋರಾಡಿದ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರು ಹುಟ್ಟಿದ ನೆಲಕ್ಕೆ ಸೋನಿಯಾ ಗಾಂಧಿ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಭಾರತದಿಂದ ಕಾಶ್ಮೀರವನ್ನು ದೂರ ಮಾಡಿ ಸಂವಿಧಾನದ 370ನೇ ವಿಧಿಯನ್ನು ಹೇರಲಾಯಿತು. ಅದಕ್ಕೆ ಪ್ರತ್ಯೇಕ ಸಂವಿಧಾನ, ಧ್ವಜ ನೀಡಲಾಯಿತು. ಬಿಜೆಪಿ ಸರ್ಕಾರ 370ನೇ ವಿಧಿ ರದ್ದು ಪಡಿಸಿದ ನಂತರ ಅಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕವನ್ನೂ ಕಾಶ್ಮೀರದಂತೆ ಮಾಡುವ ರೀತಿಯಲ್ಲಿ ಸೋನಿಯಾ ಮಾತನಾಡಿದ್ದಾರೆ. ಭಾರತದ ಸಾರ್ವಭೌಮತ್ವ ವಿರುದ್ಧ ಮಾತನಾಡಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕ ನೆಲದಲ್ಲಿ ನಿಂತು ಕನ್ನಡಿಗರ ದೇಶಭಕ್ತಿ ಪ್ರಶ್ನೆ ಮಾಡಿದ್ದಾರೆ. ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋನಿಯಾಗಾಂಧಿ ಕ್ರಮ ತೆಗೆದುಕೊಳ್ಳಬೇಕು. ತುಕ್‍ಡೆ, ತುಕ್‍ಡೆ ಗ್ಯಾಂಗ್‍ನ ನೇತೃತ್ವ ವಹಿಸಿರುವ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರು ದೇಶ ವಿಭಜನೆ ಮಾಡುವ, ವೋಟ್ ರಾಜಕಾರಣದ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಕೇಂದ್ರದ ಯೋಜನೆಗಳು ಜಾರಿಯಾಗಲು ಅಡೆ-ತಡೆಯಾಗುವುದಿಲ್ಲ. 2018ರಲ್ಲಿ ರಾಜ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕೇವಲ 17 ಜನರ ಪಟ್ಟಿಯಿತ್ತು. ಆದರೀಗ ರಾಜ್ಯದಲ್ಲಿ 54 ಲಕ್ಷ ಫಲಾನುಭವಿಗಳಿದ್ದಾರೆ. ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ಕೇಂದ್ರದ ಯೋಜನೆಗಳು ಜಾರಿಯಾಗದೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಅವರು ಹೇಳಿದರು.
ಚುನಾವಣೆ ವೇಳೆ ಕನ್ನಡಿಗರ ಮೇಲೆ, ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‍ನವರು ಗೂಂಡಾಗಿರಿ ನಡೆಸುತ್ತಿದ್ದಾರೆ. ದೇಶಕ್ಕೆ, ದೇಶದ ಸಾರ್ವಭೌಮತೆಗೆ ಅಪಾಯವಾಗಿರುವ ಕಾಂಗ್ರೆಸ್‍ಗೆ ಈ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ಹೇಳಿದ್ದಾರೆ.