ಬೆಂಗಳೂರು:
‘ಹೈಕೋರ್ಟ್ ನಿರ್ಬಂಧದ ಹೊರತಾಗಿಯೂ ದೌರ್ಜನ್ಯಕ್ಕೆ ಒಳಗಾಗಿರುವ ಬೆಳಗಾವಿಯ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡುವ ಮೂಲಕ ಬಿಜೆಪಿ ನಾಯಕರು ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸಿ, ಅಗೌರವಿಸಿರುವುದು ಮಾತ್ರವಲ್ಲ ತಮ್ಮ ಅಸೂಕ್ಷ್ಮತೆಯನ್ನು ಮೆರೆದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಸಂತ್ರಸ್ತ ಮಹಿಳೆಯು ಮಾನಸಿಕವಾಗಿ ತೀವ್ರವಾಗಿ ಜರ್ಝರಿತರಾಗಿರುವ ಹಿನ್ನೆಲೆಯಲ್ಲಿ ಹಾಗೂ ಮಾನಸಿಕ ಆಘಾತದಲ್ಲಿರುವ ಈ ಸಂದರ್ಭದಲ್ಲಿ ಆಕೆಯ ಭೇಟಿಗೆ ಅಗಮಿಸುವವರನ್ನು ನಿರ್ಬಂಧಿಸಬೇಕೆಂದು ಮುಖ್ಯನ್ಯಾಯಾಧೀಶರು ಸ್ವಯಂಪ್ರೇರಿತರಾಗಿ ಇಂದು ಬೆಳಗ್ಗೆ ಸೂಚಿಸಿದ್ದರು. ರಾಜಕೀಯ ನಾಯಕರು ಸಂತ್ರಸ್ತ ಮಹಿಳೆಯನ್ನು ಭೇಟಿಯಾಗುವ ಸುದ್ದಿಯ ಹಿನ್ನೆಲೆಯಲ್ಲಿಯೇ ಮುಖ್ಯನ್ಯಾಯಾಧೀಶರು ಈ ಸೂಚನೆ ನೀಡಿರುವುದು ಗಮನಾರ್ಹ ಎಂದು ಹೇಳಿದ್ದಾರೆ.
ರಾಜ್ಯ ಹೈಕೋರ್ಟ್ ನ ನಿರ್ಬಂಧದ ಹೊರತಾಗಿಯೂ ದುರುಳರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬೆಳಗಾವಿಯ ಸಂತ್ರಸ್ತ ಮಹಿಳೆಯನ್ನು ಭೇಟಿಮಾಡುವ ಮೂಲಕ ಬಿಜೆಪಿ ನಾಯಕರು ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸಿ ಅಗೌರವಿಸಿರುವುದು ಮಾತ್ರ ಅಲ್ಲ ತಮ್ಮ ಅಸೂಕ್ಷ್ಮತೆಯನ್ನು ಮೆರೆದಿದ್ದಾರೆ.
— CM of Karnataka (@CMofKarnataka) December 16, 2023
ಸಂತ್ರಸ್ತ ಮಹಿಳೆಯು ಮಾನಸಿಕವಾಗಿ ತೀವ್ರವಾಗಿ ಜರ್ಝರಿತರಾಗಿರುವ… pic.twitter.com/gWkuTW1gTA
ಮಹಿಳೆಯು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಂದರ್ಶಕರ ಭೇಟಿಯು ಆಕೆಯ ಆರೋಗ್ಯ ಹಾಗೂ ಚಿಕಿತ್ಸೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಮಹಿಳೆಯ ಹಿತದೃಷ್ಟಿಯಿಂದ ಸಂದರ್ಶಕರ ಭೇಟಿಯನ್ನು ನಿರ್ಬಂಧಿಸುವುದು ಅಗತ್ಯ ಎಂದು ತಾನು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ. ಯಾವುದೇ ವ್ಯಕ್ತಿ, ಸಮೂಹ, ಗುಂಪು, ಸಂಘಟನೆ, ರಾಜಕೀಯ ಪಕ್ಷಗಳು ಹಾಗೂ ಇನ್ನಿತರರು ಮಹಿಳೆಯ ಚಿಕಿತ್ಸೆಯ ಹೊಣೆ ಹೊತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಪೂರ್ವ ಲಿಖಿತ ಅನುಮತಿ ಇಲ್ಲದೇ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಮಹಿಳೆಯು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಂದರ್ಶಕರ ಭೇಟಿಯು ಆಕೆಯ ಆರೋಗ್ಯ ಹಾಗೂ ಚಿಕಿತ್ಸೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಮಹಿಳೆಯ ಹಿತದೃಷ್ಟಿಯಿಂದ ಸಂದರ್ಶಕರ ಭೇಟಿಯನ್ನು ನಿರ್ಬಂಧಿಸುವುದು ಅಗತ್ಯ ಎಂದು ತಾನು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ.
— CM of Karnataka (@CMofKarnataka) December 16, 2023
ಯಾವುದೇ ವ್ಯಕ್ತಿ, ಸಮೂಹ, ಗುಂಪು, ಸಂಘಟನೆ, ರಾಜಕೀಯ ಪಕ್ಷಗಳು ಹಾಗೂ… pic.twitter.com/KbwXj1D6K9
ಹೀಗಿದ್ದರೂ ಅಮಾನುಷ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸುವ ದುರ್ಬುದ್ಧಿ ತೋರಿರುವ ಬಿಜೆಪಿ ನಾಯಕರು ಸತ್ಯಶೋಧನೆಯ ಹೆಸರಿನಲ್ಲಿ ಕೋರ್ಟ್ ನಿರ್ದೇಶನಗಳನ್ನು ಗಾಳಿಗೆ ತೂರಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾರೆ. ಸಂತ್ರಸ್ತೆಯ ಸೂಕ್ಷ್ಮ ಮಾನಸಿಕ ಸ್ಥಿತಿ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ಸಂವೇದನಾಶೂನ್ಯ ಬಿಜೆಪಿ ನಾಯಕರು ಹಾಗೂ ಅವರ ಬೆನ್ನಿಗೆ ನಿಂತು ಚಿತಾವಣೆ ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾರ ನಡೆ-ನುಡಿಯನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.