ಬೆಂಗಳೂರು, ಮಾ.04: “ಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್ ಗಳನ್ನು ಪಾವತಿ ಮಾಡಲಾಗುವುದು. ಸಣ್ಣ, ಸಣ್ಣ ಬಿಲ್ ಗಳನ್ನು ಪಾವತಿ ಮಾಡುವುದಾಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದು, ಹಣ ಬಂದ ತಕ್ಷಣ ಪಾವತಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಗುತ್ತಿಗೆದಾರರ ಬಿಲ್ ಬಾಕಿ ವಿಚಾರ ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಭೇಟಿ ಬಗ್ಗೆ ಕೇಳಿದಾಗ, “ಬಿಜೆಪಿ ಕಾಲದಲ್ಲಿ ಅವರು ನನ್ನ ಇಲಾಖೆಯೊಂದರಲ್ಲಿಯೇ ರೂ.1.20 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳಿಗೆ ಆದೇಶ ನೀಡಿ ಹೋಗಿದ್ದು ಕೆಲಸ ನಡೆಯುತ್ತಿದೆ. ಪ್ರಸ್ತುತ ರೂ.6 ಸಾವಿರ ಕೋಟಿಯಷ್ಟು ಮಾತ್ರ ಬಿಲ್ ನೀಡಲು ಅವಕಾಶವಿದೆ. ಕೇಂದ್ರದಿಂದ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಗುತ್ತಿಗೆದಾರರು ಅವರ ನೋವನ್ನು ಹೇಳಿಕೊಂಡಿದ್ದಾರೆ” ಎಂದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಸೋಮವಾರ ಭೇಟಿ ಮಾಡಿ, ಬಾಕಿ ಬಿಲ್ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಆರ್ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ ಎಂ ರವೀಂದ್ರ, ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ, ಕಾರ್ಯಾಧ್ಯಕ್ಷರಾದ ಸಂಕಾಗೌಡಶಾನಿ, ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷರಾದ ಶಾಂತೇಗೌಡ, ಬಿ ಸಿ ದಿನೇಶ್, ಕೃಷ್ಣೆಗೌಡ, ಕೃಷ್ಣ, ಕಾರ್ಲೆ ಇಂದ್ರೇಶ್, ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.