Home ರಾಜಕೀಯ Drought in Karnataka | ಬರ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ಬಿಜೆಪಿ-ಜೆಡಿಎಸ್...

Drought in Karnataka | ಬರ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ಬಿಜೆಪಿ-ಜೆಡಿಎಸ್ ನಾಯಕರು ಬದ್ಧತೆ ತೋರಬೇಕು: ಡಿ.ಕೆ.ಶಿವಕುಮಾರ್

28
0
DK Shivakumar

ಬೆಂಗಳೂರು:

“ರಾಜ್ಯದ 200ಕ್ಕೂ ಹೆಚ್ಚು ತಾಲೂಕು ಬರಕ್ಕೆ ಸಿಲುಕಿದ್ದು, ಬರ ಪರಿಹಾರ ಹಾಗೂ ನರೇಗಾ ಉದ್ಯೋಗ ದಿನಗಳ ಹೆಚ್ಚಳ ವಿಚಾದಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ತಮ್ಮ ಬದ್ಧತೆ ಪ್ರದರ್ಶಿಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

“ಕೇಂದ್ರ ಸರ್ಕಾರ ರಾಜ್ಯದ ಬರದ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಪ್ರಚಾರಕ್ಕಾಗಿ ಬಿಜೆಪಿ ಹಾಗೂ ದಳದವರು ಬಹಳ ಅನುಕಂಪದಿಂದ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಬರ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೇಳಿತ್ತು. ನಂತರ ಕೇಂದ್ರ ಸರ್ಕಾರ ವರದಿ ಸ್ವೀಕರಿಸಿ ಕೇಂದ್ರ ಬರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳಿಸಿತ್ತು. ರಾಜ್ಯದಿಂದ ಆಯ್ಕೆಯಾದ 25 ಸಂಸದರು ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮಾಡಲಿ. ಕೇವಲ ಪ್ರಚಾರಕ್ಕೆ ಪ್ರವಾಸ ಮಾಡಿದರೆ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರ ಕಾನೂನು ಪ್ರಕಾರ ಬರಕ್ಕೆ ಬಿಡುಗಡೆ ಮಾಡಬೇಕಾದ ಪರಿಹಾರ ಹಣ ನೀಡಲಿ,” ಎಂದು ತಿಳಿಸಿದರು.

ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ 800 ಕೋಟಿ ಹಣ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕುಡಿಯುವ ನೀರು, ಪಶುಗಳಿಗೆ ಮೇವು ಪೂರೈಕೆಗೆ ಆದ್ಯತೆ ನೀಡಲು ತಿಳಿಸಿದ್ದೇವೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕು ಬರಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ನರೇಗಾ ಯೋಜನೆಯ ಮೂಲಕ ಸೀಮಿತ ಇರುವ ಉದ್ಯೋಗ ದಿನವನ್ನು 100ರಿಂದ 150 ದಿನಕ್ಕೆ ವಿಸ್ತರಣೆ ಮಾಡಲು ಪ್ರಸ್ತಾಪ ಇಟ್ಟಿದ್ದು ಕೇಂದ್ರ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ. ರಾಜ್ಯದ ಹಿತಕ್ಕಾಗಿ ಸಂಸದರು ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಶಾಸಕರು ಕೇಂದ್ರ ಸರ್ಕಾರದ ಬಳಿ ಒತ್ತಡ ಹೇರಲಿ. ಆನಂತರ ಅವರು ರಾಜಕಾರಣ ಮಾಡಲಿ. ಅವರ ರಾಜಕಾರಣಕ್ಕೆ ನಾವು ಬೇಡ ಎನ್ನುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಉದ್ಯೋಗ ದಿನ ಹೆಚ್ಚಿಸದಿದ್ದರೆ, ನಾವೇ ಹೆಚ್ಚಳ ಮಾಡುತ್ತೇವೆ: ನಾವು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಕಾನೂನು ಪ್ರಕಾರ ಬರ ಪರಿಸ್ಥಿತಿ ಇದ್ದಾಗ ನರೇಗಾ ಯೋಜನೆಯಡಿ ನೀಡುವ ಉದ್ಯೋಗ ದಿನಗಳನ್ನು 150 ದಿನಗಳಿಗೆ ಹೆಚ್ಚಳ ಮಾಡಬೇಕು. ಈ ಉದ್ಯೋಗ ದಿನ ಹೆಚ್ಚಳ ಮಾಡಲು ಆಗದಿದ್ದರೆ ಕೇಂದ್ರ ಸರ್ಕಾರ ಅದನ್ನು ಸ್ಪಷ್ಟವಾಗಿ ತಿಳಿಸಲಿ. ಆ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡಲಿದೆ.”

ಕಾಂಗ್ರೆಸ್ ನ 68 ಶಾಸಕರನ್ನು ಆಪರೇಶನ್ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂಬ ವಿಚಾರವಾಗಿ ಕೇಳಿದಾಗ, “ಅವರ ವೃತ್ತಿ ಅದು. ಅದನ್ನು ಅವರು ಬಿಡುವುದಿಲ್ಲ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here