ಬೆಂಗಳೂರು:
ಸಿಎಂ ಕುರ್ಚಿಗೆ ಟವೆಲ್ ಹಾಕಿದವರೊಬ್ಬರು ಚುನಾವಣೆ ಖರ್ಚಿಗೆ 2 ಸಾವಿರ ಕೋಟಿ ಕೊಡುವುದಾಗಿ ಹೇಳಿದ ಮಾಹಿತಿ ಇದೆ. ಹಾಲಿ ಮುಖ್ಯಮಂತ್ರಿಗಳು ಕಷ್ಟಪಟ್ಟು ಅದರ ಅರ್ಧ ವ್ಯವಸ್ಥೆ ಮಾಡುವುದಾಗಿ ಹೇಳಿದ ಮಾಹಿತಿ ಸಿಕ್ಕಿದೆ. ಇದು ಒಳಗಿನ ಸುದ್ದಿ. ಸತ್ಯವನ್ನು ಅವರೇ ಹೇಳಬೇಕು. ಇದನ್ನು ನೋಡಿದರೆ ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು ಎಂದು ಅರ್ಥವಾಗುತ್ತದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಟೀಕಿಸಿದರು.
ತನಿಖೆ ಆದರೆ ಸಂಗ್ರಹಿತ ಮೊತ್ತ, ನಂಬರ್ 1ರಿಂದ ಆದ ಸಂಗ್ರಹ, ನಂಬರ್ 2 ಸಂಗ್ರಹಿಸಿದ ಮೊತ್ತದ ವಿವರ ಹೊರಬರುತ್ತದೆ. ಅಂತರರಾಜ್ಯ ವಿಷಯವಾದ ಕಾರಣ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ಅವರು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಐಟಿ ದಾಳಿ ಹಿಂದೆ ರಾಜಕೀಯ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರೆ, ಎಲ್ಲ ಖಾತೆ ತಮ್ಮ ಕೈಯಲ್ಲಿ ಇರುವಂತೆ ವರ್ತಿಸುವ ಪ್ರಿಯಾಂಕ್ ಖರ್ಗೆಯವರು ದಾಳಿ ವಿರುದ್ಧ ಅಣಿಮುತ್ತು ಉದುರಿಸುತ್ತಾರೆ ಎಂದು ಟೀಕಿಸಿದರು. ಏಕ್ ತರಫ್ ಸೆ ಆಲೂ ಡಾಲ್‍ನ, ದೂಸ್‍ರಾ ತರಫ್ ಸೆ ಸೋನಾ ನಿಕಾಲ್‍ನ ಎಂಬಂತೆ ದುಡ್ಡು ತೆಗೆದಿದ್ದಾರಾ ಎಂದು ವ್ಯಂಗ್ಯವಾಡಿದರು.
ಅಬಕಾರಿ ಸುಂಕ, ವಿದ್ಯುತ್ ದರ, ಸ್ಟ್ಯಾಂಪ್ ಶುಲ್ಕ ಹೀಗೆ ಎಲ್ಲ ಬೆಲೆಏರಿಸಿದ ಬಳಿಕ ಬಾಕಿ ಬಿಲ್ ನೀಡಲು ನೀವು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದೀರಿ. ಬಹುಶಃ ಪಂಜಾಬ್ ಬಳಿಕ ಕರ್ನಾಟಕದ ಸಿಎಂ ಕೂಡ ತನ್ನ ರಾಜ್ಯ ದಿವಾಳಿ ಆಗುತ್ತಿದೆ ಎಂದು ಮುನ್ಸೂಚನೆ ಕೊಟ್ಟಿದ್ದಾರೆ. ಇಷ್ಟಾದರೂ ಇವರು ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಡುವುದನ್ನು ನಿಲ್ಲಿಸಿಲ್ಲ ಎಂದು ಟೀಕಿಸಿದರು.
ಈ ಸರಕಾರ ವಸೂಲಿ ಸರಕಾರ ಎಂದು ಟ್ಯಾಗ್‍ಲೈನ್ ಕೊಟ್ಟರೆ ತಪ್ಪಾಗದು. ಹಾಗಾಗಿ ವಸೂಲಿಗೆ ಸಂಬಂಧಿಸಿ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದರು. ದೇಶ ಮತ್ತು ನಾಡಿನ ಜನತೆಗೆ ಅವರು ನಾಡಹಬ್ಬ ದಸರಾ ಶುಭಾಶಯ ಕೋರಿದರು. ವಿಧಾನ ಪರಿಷತ್ ಸದಸ್ಯ ಮತ್ತು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡ ಭಾಸ್ಕರ ರಾವ್ ಉಪಸ್ಥಿತರಿದ್ದರು.