ಬೆಂಗಳೂರು: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯವು ಜಾಮೀನು ಮಂಜೂರು ಮಾಡುವ ವೇಳೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ಅದರಂತೆ ₹2 ಲಕ್ಷದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗಳನ್ನು ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ ನ್ಯಾಯಾಲಯದ ಅನುಮತಿ ಇಲ್ಲದೆ ನ್ಯಾಯವ್ಯಾಪ್ತಿಯಿಂದ ಹೊರಗೆ ಹೋಗಬಾರದು ಎಂಬ ಷರತ್ತನ್ನೂ ವಿಧಿಸಲಾಗಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಏಳು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಭೈರತಿ ಬಸವರಾಜ್ ಅವರನ್ನು ಫೆಬ್ರವರಿ 13ರಂದು ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಹಲವು ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ವೇಳೆ ಸಮರ್ಪಕವಾಗಿ ಸಹಕರಿಸಿಲ್ಲ ಎಂಬ ಕಾರಣದಿಂದ ಹಲವು ಬಾರಿ ತನಿಖೆ ಮುಂದುವರಿಸಲಾಗಿದ್ದು, ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಇದಾದ ಬಳಿಕ ಭೈರತಿ ಬಸವರಾಜ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಇದೀಗ ಅದನ್ನು ಪರಿಗಣಿಸಿದ ನ್ಯಾಯಾಲಯ ಷರತ್ತುಬದ್ದ ಜಾಮೀನು ನೀಡಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣವು ಬೆಂಗಳೂರಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
