ಬೆಂಗಳೂರು: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಮಾರ್ಚ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಂಧನದ ನಂತರ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಲಮಾಣಿ ಜೊತೆಗೆ ಅವರ ಸರ್ಕಾರಿ ಪಿಎ ಮಂಜುನಾಥ್ ಹಾಗೂ ಸಂಬಂಧಿ ಗುರುಲಮಾಣಿ ಅವರಿಗೊ ಕೂಡ ನ್ಯಾಯಾಂಗ ಬಂಧನ ವಿಧಿಸಿದೆ. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಇದರ ಮಧ್ಯೆ, ಗುತ್ತಿಗೆದಾರ ವಿಜಯ್ ಪೂಜಾರಿಯೊಂದಿಗೆ ಚಂದ್ರು ಲಮಾಣಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆಡಿಯೋದಲ್ಲಿ ಹಣದ ವಿಚಾರವಾಗಿ ತೀವ್ರ ಮಾತುಕತೆ ಹಾಗೂ ಧಮಕಿ ಹಾಕಿರುವ ಶಬ್ದಗಳು ಕೇಳಿಸುತ್ತವೆ ಎಂದು ಹೇಳಲಾಗುತ್ತಿದೆ. ಆದರೆ ಈ ಆಡಿಯೋದ ನೈಜತೆ ಬಗ್ಗೆ ಅಧಿಕೃತ ದೃಢೀಕರಣವಾಗಿಲ್ಲ.
ಈ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟರೆ, ಬಿಜೆಪಿ ನಾಯಕರು ಇದೊಂದು ರಾಜಕೀಯ ಷಡ್ಯಂತ್ರವಾಗಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಕಮಿಷನ್ ಬೇಡಿಕೆ ಇಟ್ಟಿದ್ದಾರೆಯೆಂಬ ಆರೋಪದ ಮೇಲೆ ಲೋಕಾಯುಕ್ತರು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಶಾಸಕ ಸಿಕ್ಕಿಬಿದ್ದಿದ್ದು, ತನಿಖೆ ಮುಂದುವರೆದಿದೆ.
ವೈರಲ್ ಆಡಿಯೋಗಳು ಮತ್ತು ರಾಜಕೀಯ ವಾಕ್ಸಮರದ ನಡುವೆ, ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
