2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ, ತಮ್ಮ ಪ್ರಮಾಣ ಪತ್ರದಲ್ಲಿ ರೂ. 13.46 ಲಕ್ಷ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಐದು ವರ್ಷಗಳ ನಂತರ ಸಂಸದರೂ, ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯರ ಆಸ್ತಿ ಮೌಲ್ಯವು ರೂ. 4.10 ಕೋಟಿಗೆ ಏರಿಕೆಯಾಗಿದೆ.
ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಆದರೆ, ಒಟ್ಟು 4.10 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.
ಕೈಯಲ್ಲಿ ನಗದು 80 ಸಾವಿರ ರೂ.ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ, 1,79,31,750 ರೂ. ಮಾರುಕಟ್ಟೆ ಮೌಲ್ಯದ ಷೇರುಗಳು, ಮ್ಯೂಚುವಲ್ ಫಂಡ್, ಈಕ್ವಿಟಿಗಳಲ್ಲಿ 1,99,44,863 ರೂ. ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ ವಿವಿಧ ವಿಮಾ ಕಂಪನಿಗಳಲ್ಲಿನ ವಿಮೆ ಮೊತ್ತ 25,28,446 ರೂ. ಸೇರಿ ಒಟ್ಟು ಚರಾಸ್ತಿ ಮೌಲ್ಯ 4.10 ಕೋಟಿ ರೂ.ಗಳಾಗಿದೆ ಎಂದು ಅವರು ಸಲ್ಲಿಸಿರುವ ಆಸ್ತಿ ವಿವರ ಸಲ್ಲಿಕೆ ವೇಳೆ ವಿವರಣೆ ನೀಡಿದ್ದಾರೆ.
ತೇಜಸ್ವಿ ಸೂರ್ಯರ ಪ್ರಮಾಣ ಪತ್ರದ ಪ್ರಕಾರ, ಮ್ಯೂಚುಯಲ್ ಫಂಡ್ ಹಾಗೂ ಷೇರುಗಳಲ್ಲಿನ ಹೂಡಿಕೆ ಅವರ ಪ್ರಮುಖ ಆದಾಯ ಮೂಲವಾಗಿದೆ. ಅವರು ರೂ. 1.99 ಕೋಟಿಯನ್ನು ಮ್ಯೂಚುಯಲ್ ಫಂಡ್‌ಗಳಲ್ಲಿ ತೊಡಗಿಸಿದ್ದರೆ, ರೂ. 1.79 ಕೋಟಿಯನ್ನು ಷೇರುಗಳಲ್ಲಿ ತೊಡಗಿಸಿದ್ದಾರೆ.
ತೇಜಸ್ವಿ ಸೂರ್ಯ ವಿರುದ್ಧ ಮೂರು ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಇತ್ತೀಚೆಗೆ ನಗರ್ತಪೇಟೆಯಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆ ಸಂಬಂಧ ದಾಖಲಾಗಿರುವ ಎರಡು ಪ್ರಕರಣಗಳು ಸೇರಿವೆ.
ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.