ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯದ ಬಿಸಿಯ ಜತೆಗೆ ಟಿಕೆಟ್ ಪಡೆದುಕೊಂಡು ಸ್ಪರ್ಧೆಯಲ್ಲಿರುವ ಹಾಲಿ ಸಂಸದರಿಗೆ ಸ್ವಪಕ್ಷದ ಕಾರ್ಯಕರ್ತರಿಂದಕಲೇ ವಿರೋಧ ವ್ಯಕ್ತವಾಗುತ್ತಿದೆ. ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ.ಸಿ.ಮೋಹನ್ ವಿರುದ್ಧ ಪಕ್ಷದ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.
ಶಾಂತಿನಗರದಲ್ಲಿ ಪ್ರಚಾರದ ವೇಳೆ ಸಂಸದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ದು, ಹಾಲಿ ಸಂಸದನಿಗೆ ಭಾರೀ ಮುಖಭಂಗ ಉಂಟಾಗಿದೆ.
“ಮೂರು ಬಾರಿ ಸಂಸದರಾಗಿ ಲೋಕಸಭೆಗೆ ಕಳುಹಿಸಿದ್ದೇವೆ. ನಮ್ಮ ಕ್ಷೇತ್ರದ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಏನು ಮಾಡಿದ್ದೀರಿ? ನಿಮ್ಮ ಸಾಧನೆ ಏನು? ನಾವು ಮೋದಿಯವರನ್ನು ನೋಡಿ ನಿಮಗೆ ಮತ ಹಾಕಿದ್ದೇವೆ. ನೀವು ಈ ಪ್ರದೇಶಕ್ಕೆ ಎಷ್ಟು ಬಾರಿ ಬಂದಿದ್ದೀರಿ? ಬಡವರಿಗೆ ಏನು ಮಾಡಿದ್ದೀರಾ?” ಎಂದು ಹಲವು ಪ್ರಶ್ನೆಗಳನ್ನು ಬಿಜೆಪಿ ಕಾರ್ಯಕರ್ತರು ಕೇಳಿದಾಗ, ಕೇಂದ್ರದ ಯೋಜನೆಗಳನ್ನು ಉಲ್ಲೇಖಿಸುತ್ತಾ ಸಮಜಾಯಿಷಿ ನೀಡಲು ಬಿಜೆಪಿ ಸಂಸದ ಪಿಸಿ ಮೋಹನ್ ಯತ್ನಿಸಿದರು.
ಪಿ.ಸಿ.ಮೋಹನ್ ಅಭಿಮಾನಿಗಳು ಆಕ್ರೋಶಗೊಂಡಿದ್ದ ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕೆ ಇಳಿದರು. ವಾಗ್ವಾದವು ವಿಪರೀತಗೊಂಡು ಪಿ. ಸಿ.ಮೋಹನ್‌ಗೆ ಧಿಕ್ಕಾರ ಕೂಗಿದರು. ಆಕ್ರೋಶ ಬಿಜೆಪಿ ಕಾರ್ಯಕರ್ತರನ್ನು ಎಷ್ಟೇ ಸಮಾಧಾನಿಸಲು ಪಿ.ಸಿ.ಮೋಹನ್ ವಿಫಲರಾಗಿ ಚುನಾವಣಾ ಪ್ರಚಾರವನ್ನು ಅರ್ಧಕ್ಕೇ ನಿಲ್ಲಿಸಿ ತೆರಳಿದರು.