ಬೆಂಗಳೂರು:
ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆದ್ದೇ ಗೆಲ್ಲಬೇಕಿದೆ. ಇದಕ್ಕಾಗಿ ಯುವ ಮೋರ್ಚಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ರಾಜ್ಯದ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ಅವರು ತಿಳಿಸಿದರು.
ನಗರದ “ರ್ಯಾಡಿಸನ್ ಬ್ಲೂ” ಹೋಟೆಲ್‍ನಲ್ಲಿ ಇಂದು ನಡೆದ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣೆಯ ಪರೀಕ್ಷೆಯಲ್ಲಿ ಗೆದ್ದು ನಿಮ್ಮ ನಾಯಕತ್ವವನ್ನು ದೃಢಪಡಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಬಿಜೆಪಿಯನ್ನು ಈಗ ಪ್ರಪಂಚವೇ ದೊಡ್ಡ ಪಕ್ಷವಾಗಿ ಗುರುತಿಸುತ್ತಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಪ್ರಧಾನಿಯವರು 18ರಿಂದ 20 ಗಂಟೆ ಕೆಲಸ ಮಾಡುತ್ತಾರೆ. ಕೋವಿಡ್‍ನಿಂದ ಹೊರಬರಲು ಶ್ರೀ ನರೇಂದ್ರ ಮೋದಿ ಅವರ ಶ್ರಮವೂ ಕಾರಣವಾಗುತ್ತಿದೆ. ಅಯೋಧ್ಯೆ, ಕಾಶ್ಮೀರದ ವಿಚಾರ, ಭಯೋತ್ಪಾದನೆ ಮೊದಲಾದ ವಿಚಾರಗಳಲ್ಲಿ ದಿಟ್ಟ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಅಂಥ ಚಮತ್ಕಾರವನ್ನು ಬಿಜೆಪಿ ಮಾಡಿದೆ ಎಂದು ತಿಳಿಸಿದರು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲ್ ಕೃಷ್ಣ ಆಡ್ವಾಣಿ ಅವರ ದೂರದೃಷ್ಟಿಯ ಯೋಜನೆಗಳಿಂದ ಪಕ್ಷ ಬಲಿಷ್ಠವಾಗಿದೆ. ನಮ್ಮ ಸರಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಜೊತೆಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಬಿಜೆಪಿ ಈ ದೇಶಕ್ಕೆ ಅನಿವಾರ್ಯ. ಮತಬ್ಯಾಂಕ್‍ಗಾಗಿ ದೇಶವನ್ನು ಬಲಿ ಕೊಡುವ ಪರಿಸ್ಥಿತಿ ಬರದಂತೆ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ನಾನೂ ಇಲ್ಲಿಂದಲೇ ಬಂದವನು. ಅದಕ್ಕೇ ನನಗೆ ಯುವ ಮೋರ್ಚಾ ವೇದಿಕೆ ಅತ್ಯಂತ ಇಷ್ಟವಾದುದು. ಕಾವೇರಿ ನದಿಯ ಮಾದರಿಯಲ್ಲಿ ಬಿಜೆಪಿ ಹರಿಯುವ ನದಿ. ಆ ಹರಿಯುವ ನದಿಗೆ ಯುವ ಮೋರ್ಚಾ ಒಂದು ಕವಲಾಗಿ ಸೇರುತ್ತದೆ. ದೊಡ್ಡ ನದಿ ಸೇರುವ ದೊಡ್ಡ ತೊರೆ ಇದಾಗಿದೆ. ಯು ಮೋರ್ಚಾ ಸಂಘಟನೆಯಿಂದ ಬಂದವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತದೆ ಎಂದರು.
ನಾನು ಕೂಡ ತುರ್ತು ಪರಿಸ್ಥಿತಿ ಜೈಲಿಗೆ ಹೋಗಿ ಬಂದ ಬಳಿಕ ಒಂದು ವರ್ಷ ಅಜ್ಞಾತವಾಸದಲ್ಲಿದ್ದೆ. ನಾನು ಪೆಟ್ರೋಲ್ ಬಂಕ್‍ನಲ್ಲಿ ಸ್ಕೂಟರ್‍ಗೆ ಪೆಟ್ರೋಲ್ ಹಾಕಿಸ್ತಾ ಇದ್ದೆ. ಅಲ್ಲಿಂದ ಕರೆದುಕೊಂಡು ಹೋಗಿ ದೊಡ್ಡಬಳ್ಳಾಪುರದಲ್ಲಿ ಯುವ ಮೋರ್ಚಾ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದರು. ಅಲ್ಲಿಂದ ಬೆಳೆದು ಈಗ ಸಚಿವನಾಗಿ ನಿಮ್ಮೆದುರು ನಿಂತಿದ್ದೇನೆ ಎಂದು ವಿವರಿಸಿದರು.
ಯುವ ಮೋರ್ಚಾ ಛಾಪು ಬೆಳೆಸಲು ಮುಂದಾಗಿ. ಸಿಂಹಕ್ಕೆ ಯಾರೂ ಪಟ್ಟಾಭಿಷೇಕ ಮಾಡುವುದಿಲ್ಲ. ಹೋರಾಟದ ಮೂಲಕ ಗುರುತಿಸಿಕೊಂಡರೆ ಯುವ ಮೋರ್ಚಾಗೆ ಶಕ್ತಿ ಬರುತ್ತದೆ ಎಂದರು. ಯುವ ಮೋರ್ಚಾಗೆ ಮಾರ್ಗದರ್ಶನ ಮಾಡುವ ನಾಯಕರಿಗೆ ಕೊರತೆ ಇಲ್ಲ. ನಿಮ್ಮ ವೈಯಕ್ತಿಕ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ನೀವೇ ಮಾಡಬೇಕು ಎಂದು ತಿಳಿಸಿದರು.
ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ತೇಜಸ್ವಿ ಸೂರ್ಯ ಅವರು ಮಾತನಾಡಿ, ಯುವ ಮೋರ್ಚಾವು ನಿರಂತರವಾಗಿ ಅನೇಕ ನಾಯಕರನ್ನು ಪಕ್ಷಕ್ಕೆ ನೀಡಿದೆ. ಅದನ್ನು ಸ್ಫೂರ್ತಿಯ ವಿಷಯವನ್ನಾಗಿ ಯುವ ಮೋರ್ಚಾದ ಪದಾಧಿಕಾರಿಗಳು ಮಾಡಿಕೊಂಡು ಬೆಳೆಯಬೇಕು ಎಂದು ಆಶಿಸಿದರು.
ಯುವ ಮೋರ್ಚಾವು ಮಾದರಿ ಸಂಘಟನೆ. ಅದು ಎಲ್ಲ ರೀತಿಯ ಯುವಕರನ್ನು ಪ್ರತಿನಿಧಿಸುವ ಸಂಘಟನೆಯಾಗಿ ಬೆಳೆಯಬೇಕು. ಯುವ ಮೋರ್ಚಾವು ರಾಜಕೀಯದಲ್ಲಿ ಹೊಸ ಪ್ರಯತ್ನ ಅಳವಡಿಸಿಕೊಳ್ಳುವಂತಾಗಬೇಕು. ಮೂಲ ತತ್ವ, ಸಿದ್ಧಾಂತಗಳಲ್ಲಿ ಸ್ಥಿರತೆ ಮತ್ತು ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಬದಲಾವಣೆ ನಮ್ಮದಾಗಿರಬೇಕು ಎಂದು ಅವರು ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ನಡೆಯಿತು.
— BJP Karnataka (@BJP4Karnataka) July 18, 2021
ಕಾರ್ಯಾಕಾರಿಣಿಯಲ್ಲಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಶ್ರೀ @Tejasvi_Surya, ಸಚಿವ ಶ್ರೀ @RAshokaBJP, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @MTenginkai, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಶ್ರೀ @DrSandeepBJYM ಹಾಗೂ ಪ್ರಮುಖರು ಉಪಸ್ಥಿತರಿದ್ದರು. pic.twitter.com/7hd13hGbre
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟರು. ಕೊರೊನಾ ಎರಡು ಅಲೆಗಳು ಬಂದು ಹೋಗಿವೆ. ಮೂರನೇ ಅಲೆ ಬರುವಂತಿದೆ. ಆದರೂ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಸಿಕ್ಕಿಲ್ಲ. ರಾಜ್ಯದ ಯುವ ಕಾಂಗ್ರೆಸ್‍ನಲ್ಲೂ ಸಮಸ್ಯೆ ಮುಂದುವರಿದಿದೆ. ಗೆದ್ದವರು ಒಬ್ಬರು; ಇನ್ನೊಬ್ಬರಿಗೆ ಅಧ್ಯಕ್ಷತೆ, ಅದರಲ್ಲೂ ಗುಂಪುಗಾರಿಕೆ- ಹೊಡೆದಾಟ ಮುಂದುವರಿದಿದೆ ಎಂದು ವಿವರಿಸಿದರು.
ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ|| ಸಂದೀಪ್ ಕುಮಾರ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಮ್ಮದೇ ಸರಕಾರವಿದೆ. ಯುವ ಮೋರ್ಚಾವು ಸಮಾಜದ ನೊಂದವರ- ತೊಂದರೆಗೆ ಒಳಗಾದವರಿಗೆ ನೆರವಾಗಿ ಹೋರಾಟಕ್ಕೂ ಸೈ ಸೇವೆಗೂ ಸೈ ಎಂದು ಸಾಬೀತು ಪಡಿಸಿದೆ. ಯುವ ಮೋರ್ಚಾ ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ ಮತ್ತು ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.