ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನೂತನ ಮಹಾಪೌರ-ಉಪ ಮಹಾಪೌರರಾಗಿ ಬಿಜೆಪಿಯ ರಾಮಪ್ಪ ಬಡಿಗೇರ ಹಾಗೂ ದುರಗಮ್ಮ ಬಿಜವಾಡ ಆಯ್ಕೆಯಾದರು.
ಶನಿವಾರ ನಡೆದ ಮಹಾಪೌರ ಚುನಾವಣೆಗೆ ಬಿಜೆಪಿಯಿಂದ ರಾಮಪ್ಪ ಬಡಿಗೇರ, ಕಾಂಗ್ರೆಸ್ ನಿಂದ ಇಮ್ರಾನ್ ಎಲಿಗಾರ, ಎಂಐಎಎಂ ನಿಂದ ಹುಸೇನ್ ಬಿ ಸ್ಪರ್ಧಿಸಿದ್ದರು. ಬಿಜೆಪಿಯ ರಾಮಪ್ಪ ಬಡಿಗೇರಗೆ 47 ಮತ ಬಂದರೆ, ಕಾಂಗ್ರೆಸ್ ನ ಇಮ್ರಾನ್ ಎಲಿಗಾರಗೆ 36, ಎಂಐಎಎಂನ ಹುಸೇನ್ ಬಿ ಅವರಿಗೆ ಮೂರು ಮತಗಳು ಬಂದವು.
ಉಪ ಮಹಾಪೌರ ಸ್ಥಾನಕ್ಕೆ ಬಿಜೆಪಿಯ ದುರ್ಗಮ್ಮ ಬಿಜವಾಡ, ಕಾಂಗ್ರೆಸ್ ನ ಮಂಗಳಮ್ಮ ಹಿರೇಮನಿ ಸ್ಪರ್ಧಿಸಿದ್ದರು. ದುರ್ಗಮ್ಮ ಪರವಾಗಿ 47 ಮತ ಬಂದರೆ, ಮಂಗಳಮ್ಮ ಅವರಿಗೆ 36 ಮತ ಬಂದವು.
ಒಟ್ಟು 82 ಸದಸ್ಯ ಬಲದ ಪಾಲಿಕೆಯಲ್ಲಿ ಚುನಾವಣೆ ವೇಳೆ ನಾಲ್ವರು ಸದಸ್ಯರು ಗೈರು ಹಾಜರಿದ್ದರೆ, ಮೂವರು ಸದಸ್ಯರು ತಟಸ್ಥರಾಗಿ ಉಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ಸದಸ್ಯರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟಗಿನಕಾಯಿ, ವಿಧಾನ ಪರಿಷತ್ತು ಸದಸ್ಯರಾದ ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ ಮತದಾನದಲ್ಲಿ ಪಾಲ್ಗೊಂಡುದ್ದರು.
ಬೆಳಗಾವಿ ಪ್ರಾದೇಶಿಕ ಆಯಕ್ತ ಎಸ್.ಬಿ.ಶೆಟ್ಟೆಣ್ಣವರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್.ಬಿರಾದಾರ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು