ಕಾರವಾರ | ಉತ್ತರ ಕನ್ನಡ: ಅಕ್ರಮ ಸಂಬಂಧ ಆರೋಪದ ಹಿನ್ನೆಲೆಯಲ್ಲೇ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸುಚಿತ್ರಾ ಎಂಬ ಮಹಿಳೆಯು ಸ್ಥಳೀಯ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪವಿದೆ. ಈ ವಿಷಯವನ್ನು ಸುಚಿತ್ರಾಳ ಹಿರಿಯ ಪುತ್ರಿ ತನ್ನ ತಂದೆ ಮಹೇಶ್ ನಾಯ್ಕ್ ಅವರಿಗೆ ತಿಳಿಸಿದ್ದಾಳೆ. ಬಳಿಕ ಮಹೇಶ್ ನಾಯ್ಕ್ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ದೂರು ವಿಚಾರ ತಿಳಿದ ಬಳಿಕ, ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಹಾಗೂ ಸಹಚರರು ಮಹೇಶ್ ನಾಯ್ಕ್ ಮತ್ತು ಅವರ ಸಂಬಂಧಿಕರೊಂದಿಗೆ ಗಲಾಟೆ ನಡೆಸಿದ್ದಾರೆ ಎಂಬ ಆರೋಪವಿದೆ. ಈ ವೇಳೆ ನಡೆದ ಹಲ್ಲೆಯಲ್ಲಿ ಮಹೇಶ್ ನಾಯ್ಕ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿದ್ದ ವಸಂತ್ ನಾಯ್ಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ, ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಬಳಿಕ ಪರಾರಿಯಾಗಲು ಯತ್ನಿಸಿದ್ದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿ ನಾಲ್ವರನ್ನು ಸಿದ್ದಾಪುರದಲ್ಲಿ, ಮತ್ತೂ ಮೂರು ಮಂದಿಯನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾ, ಕಮಲಾಕರ್ ಭಟ್ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸರು ಮುಂದುವರಿದ ತನಿಖೆ ನಡೆಸುತ್ತಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಮತ್ತು ಪಾತ್ರಧಾರಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
