ಬೆಂಗಳೂರು:
ಬ್ಯಾಡರಹಳ್ಳಿ ಬಿಎಂಟಿಸಿ ಬಸ್‌ನಲ್ಲಿ ಮಲಗಿದ್ದಾಗ 43 ವರ್ಷದ ಬಸ್ ಕಂಡಕ್ಟರ್ ಮುತ್ತಯ್ಯ ಸುಟ್ಟು ಕರಕಲಾದ ಎರಡು ವಾರಗಳ ನಂತರ, ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ, ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಏಕೆ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ತಳ್ಳಿ ಹಾಕುತ್ತಿಲ್ಲ.
ಅಂದು ರಾತ್ರಿ ಮುತ್ತಯ್ಯ, ಹತ್ತಿರದ ಪೆಟ್ರೋಲ್ ಬಂಕ್‌ನಿಂದ ಡೀಸೆಲ್ ಮತ್ತು ಪೆಟ್ರೋಲ್ ಖರೀದಿಸಿ, ಬಸ್‌ಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ. ಬಂಕ್ ಬಳಿ ಆತನ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನೂ UPI ವಹಿವಾಟಿನ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ಖರೀದಿಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದೇವೆ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ. ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ..
ಮಾರ್ಚ್ 10 ರಂದು ಮುಂಜಾನೆ 4.45 ರ ಸುಮಾರಿಗೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಧೀರನಹಳ್ಳಿಯ ಡಿ ಗ್ರೂಪ್ ಎಂಪ್ಲಾಯಿಸ್ ಲೇಔಟ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಕೆಎ-57-ಎಫ್-2069 ನೋಂದಣಿ ಸಂಖ್ಯೆ ಬಿಎಂಟಿಸಿ ಬಸ್ ಸುಮನಹಳ್ಳಿ ಬಸ್ ಡಿಪೋ ಸಂಖ್ಯೆ 31ಕ್ಕೆ ಸೇರಿದೆ. ಘಟನೆ ನಡೆದಾಗ ಬಸ್ ಚಾಲಕ 39 ವರ್ಷದ ಪ್ರಕಾಶ್ ಡಿಪೋದ ಕೊಠಡಿಯೊಳಗೆ ಮಲಗಿದ್ದರು.