ಬೆಂಗಳೂರು, ಜನವರಿ 6: ಬೆಂಗಳೂರಿನ ಕೋರಮಂಗಲದಲ್ಲಿರುವ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದ್ದು, ಇದು ಹುಸಿ ಬೆದರಿಕೆಯ ಸಂದೇಶ ಎಂದು ಖಚಿತಪಡಿಸಿದ್ದಾರೆ.
ಪಾಸ್ಪೋರ್ಟ್ ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ ಬಂದ ಸಂದೇಶದಲ್ಲಿ ಕಚೇರಿಯನ್ನು ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿತ್ತು. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಧಿಕಾರಿಗಳು ತಕ್ಷಣವೇ ಕೋರಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ, ಕಚೇರಿಯ ಒಳಭಾಗ ಹಾಗೂ ಹೊರಾಂಗಣದಲ್ಲಿ ಸಮಗ್ರ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಪಾಸಣೆ ಪೂರ್ಣಗೊಂಡ ಬಳಿಕ ಪೊಲೀಸರು ಇದೊಂದು ಹುಸಿ ಬೆದರಿಕೆಯ ಇ-ಮೇಲ್ ಎಂದು ಘೋಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇ-ಮೇಲ್ ಬಂದಿರುವ ಮೂಲ ಮತ್ತು ಕಳುಹಿಸಿದ ವ್ಯಕ್ತಿಯ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಹುಸಿ ಬೆದರಿಕೆಗಳ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
