ಬೆಂಗಳೂರು, ಜನವರಿ 29: ಮತದಾರರ ಪಟ್ಟಿಗೆ ಸಂಬಂಧಿಸಿದ ದೂರುಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ (ECI) ‘ಬುಕ್ ಎ ಕಾಲ್ ಟು ಬಿಎಲ್ಒ’ ಎಂಬ ಹೊಸ ಆನ್ಲೈನ್ ಸೇವೆಯನ್ನು ಆರಂಭಿಸಿದೆ.
ಬೆಂಗಳೂರು ಉತ್ತರ ನಗರ ನಿಗಮ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಈ ಸೇವೆಯ ಮೂಲಕ ಮತದಾರರು ತಮ್ಮ ತಮ್ಮ ಮತಗಟ್ಟೆಗಳ ಬೂತ್ ಲೆವಲ್ ಅಧಿಕಾರಿಗಳೊಂದಿಗೆ (BLO) ನೇರವಾಗಿ ಸಂಪರ್ಕ ಸಾಧಿಸಿ ಮತದಾರರ ಪಟ್ಟಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಈ ಸೇವೆ ಪಡೆಯಲು ಮತದಾರರು ಭಾರತ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ eci.in ನಲ್ಲಿ ಲಭ್ಯವಿರುವ ವೋಟರ್ ಸರ್ವಿಸ್ ಪೋರ್ಟಲ್ (VSP) ಗೆ ಭೇಟಿ ನೀಡಿ, ‘ಬುಕ್ ಎ ಕಾಲ್ ಟು ಬಿಎಲ್ಒ’ ಆಯ್ಕೆಯನ್ನು ಬಳಸಬೇಕು. ಅರ್ಜಿ ಸಲ್ಲಿಸಿದ ನಂತರ ಮತದಾರರಿಗೆ ರೆಫರೆನ್ಸ್ ಐಡಿ ನೀಡಲಾಗುತ್ತದೆ. ಆ ಐಡಿಯನ್ನು ಆಧರಿಸಿ ಸಂಬಂಧಿಸಿದ ಬಿಎಲ್ಒ ಅವರು ಮತದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ದೂರು ಪರಿಹರಿಸಲಿದ್ದಾರೆ.
ಈ ಸೌಲಭ್ಯವನ್ನು ವಿಶೇಷ ತೀವ್ರ ಪರಿಶೀಲನಾ ಪ್ರಕ್ರಿಯೆ (Special Intensive Revision – SIR) 2025 ಪೂರ್ವ ಚಟುವಟಿಕೆಯ ಭಾಗವಾಗಿ ಪರಿಚಯಿಸಲಾಗಿದ್ದು, ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಬೆಂಗಳೂರು ಉತ್ತರ ನಗರ ನಿಗಮ ಮನವಿ ಮಾಡಿದೆ.
