ಬೆಂಗಳೂರು: ಆನ್ಲೈನ್ ರಿಯಲ್ ಮನಿ ಗೇಮಿಂಗ್ ಪ್ಲಾಟ್ಫಾರ್ಮ್ WinZO ಪ್ರೈವೇಟ್ ಲಿಮಿಟೆಡ್ ವಿರುದ್ಧ ಹಣ ಶುದ್ಧೀಕರಣ ಆರೋಪದಡಿ ಜಾರಿ ನಿರ್ದೇಶನಾಲಯ (ED) ಭಾರೀ ಕ್ರಮ ಕೈಗೊಂಡಿದ್ದು, ₹192 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ (Freeze) ಮಾಡಿದೆ.
ಡಿಸೆಂಬರ್ 30, 2025ರಂದು ಬೆಂಗಳೂರು ವಲಯ ಕಚೇರಿ ವ್ಯಾಪ್ತಿಯಲ್ಲಿ WinZO ಕಂಪನಿಯ ಲೆಕ್ಕಪತ್ರ ಕಚೇರಿಯಲ್ಲಿ ಹಣ ಶುದ್ಧೀಕರಣ ತಡೆ ಕಾಯ್ದೆ (PMLA)–2002ರ ಸೆಕ್ಷನ್ 17 ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ED ಪ್ರಕಟಣೆಯಲ್ಲಿ ತಿಳಿಸಿದೆ.
ED ಪ್ರಕಾರ, WinZO ಕಂಪನಿಯು ಗಳಿಸಿದ ಅಕ್ರಮ ಆದಾಯವನ್ನು (Proceeds of Crime) ಬ್ಯಾಂಕ್ ಖಾತೆಗಳು, ಫಿಕ್ಸ್ಡ್ ಡೆಪಾಸಿಟ್ಗಳು (FDR) ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳ ರೂಪದಲ್ಲಿ ಇರಿಸಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. WinZO ಸಂಪೂರ್ಣವಾಗಿ ತನ್ನ ಭಾರತೀಯ ಉಪಕಂಪನಿಯ ನಿಯಂತ್ರಣದಲ್ಲಿ ಇದೆ.
BOT ಆಟಗಳ ಮೂಲಕ ವಂಚನೆ ಆರೋಪ
ಇದಕ್ಕೂ ಮೊದಲು, ನವೆಂಬರ್ 18, 2025ರಂದು WinZO ಕಚೇರಿಗಳು ಹಾಗೂ ಕಂಪನಿಯ ನಿರ್ದೇಶಕರ ನಿವಾಸಗಳಲ್ಲಿ ED ಶೋಧ ನಡೆಸಿತ್ತು. ತನಿಖೆಯಲ್ಲಿ, WinZO ತನ್ನ ಗೇಮಿಂಗ್ ಆಪ್ನಲ್ಲಿ BOT/Algorithm ಆಧಾರಿತ ಆಟಗಾರರನ್ನು (PPE/PERSONA) ಬಳಸಿ, ಗ್ರಾಹಕರಿಗೆ ನಿಜವಾದ ಆಟಗಾರರೊಂದಿಗೆ ಆಟ ಆಡುತ್ತಿರುವ ಭ್ರಮೆ ಸೃಷ್ಟಿಸಿದೆ ಎಂಬುದು ಬೆಳಕಿಗೆ ಬಂದಿದೆ.

ಗ್ರಾಹಕರು ಮಾನವರೊಂದಿಗೆ ಆಟ ಆಡುತ್ತಿದ್ದೇವೆ ಎಂದು ಭಾವಿಸಿದ್ದರೂ, ವಾಸ್ತವದಲ್ಲಿ ಅವರು ಕಂಪನಿ ನಿಯಂತ್ರಿತ BOT ಗಳ ವಿರುದ್ಧ ಆಟ ಆಡುತ್ತಿದ್ದರು, ಇದರಿಂದ ಅನ್ಯಾಯವಾಗಿ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಗ್ರಾಹಕರ ವಾಲೆಟ್ಗಳಲ್ಲಿ ಇದ್ದ ಹಣವನ್ನು ಹಿಂಪಡೆಯಲು ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪವೂ ಇದೆ.
₹802 ಕೋಟಿ ಅಕ್ರಮ ಹಣ ಪತ್ತೆ
ED ತನಿಖೆಯ ಪ್ರಕಾರ,
• ಮೇ 2024ರಿಂದ ಆಗಸ್ಟ್ 2025ರ ವರೆಗೆ BOT ಆಟಗಳ ಮೂಲಕ ₹177 ಕೋಟಿ
• ಏಪ್ರಿಲ್ 2022ರಿಂದ ಡಿಸೆಂಬರ್ 2023ರ ವರೆಗೆ ಸುಮಾರು ₹557 ಕೋಟಿ
ಆದಾಯ ಗಳಿಸಲಾಗಿದೆ.
ರಿಯಲ್ ಮನಿ ಗೇಮಿಂಗ್ ಮೇಲಿನ ಸರ್ಕಾರಿ ನಿಷೇಧದ ಬಳಿಕವೂ, WinZO ಬಳಕೆದಾರರ ₹43 ಕೋಟಿ ಹಣವನ್ನು ತನ್ನ ಬಳಿ ಕಾಯ್ದುಕೊಂಡಿತ್ತು. ಈ ಮೂಲಕ ಒಟ್ಟು ₹802 ಕೋಟಿ ಅಕ್ರಮ ಆದಾಯ ಪತ್ತೆಯಾಗಿದೆ.
ಅಮೆರಿಕಾ–ಸಿಂಗಪೂರಕ್ಕೆ ಹಣ ವರ್ಗಾವಣೆ
ಈ ಅಕ್ರಮ ಹಣದ ಒಂದು ಭಾಗವನ್ನು ಅಮೆರಿಕಾ ಮತ್ತು ಸಿಂಗಪೂರಕ್ಕೆ ವಿದೇಶಿ ಹೂಡಿಕೆ ಎಂಬ ನೆಪದಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ED ಹೇಳಿದೆ.
ಅಮೆರಿಕಾದಲ್ಲಿ “WinZO US Inc.” ಎಂಬ ಶೆಲ್ ಕಂಪನಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಆ ಖಾತೆಗಳನ್ನು ಭಾರತದಿಂದಲೇ ನಿರ್ವಹಿಸಲಾಗಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಪ್ರಗತಿಯಲ್ಲಿದ್ದು, ವಿದೇಶಿ ಹಣ ವರ್ಗಾವಣೆ ಮತ್ತು ಡಿಜಿಟಲ್ ಗೇಮಿಂಗ್ ವಂಚನೆ ಸಂಬಂಧ ಹೆಚ್ಚಿನ ಕಾನೂನು ಕ್ರಮಗಳು ಎದುರಾಗುವ ಸಾಧ್ಯತೆ ಇದೆ ಎಂದು ED ಸ್ಪಷ್ಟಪಡಿಸಿದೆ.
