ಬೆಂಗಳೂರು/ಬೆಳಗಾವಿ:
ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಹಾಲು ಹಾಗೂ ಮೊಸರಿನ ಬೆಲೆಯಲ್ಲಿ ಮೂರು ರೂಪಾಯಿ ಏರಿಕೆ ಮಾಡಲಾಗಿತ್ತು. ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ. ಹಾಲು ಒಕ್ಕೂಟಗಳ ಮನವಿಯ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹಾಲು ಹಾಗೂ ಮೊಸರಿನ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಸರ್ಕಾರ ಕೂಡಾ ಬೆಳಗಾವಿ ಅಧಿವೇಶನದಲ್ಲಿ ಸುಳಿವು ಕೊಟ್ಟಿದೆ. ಹಾಲಿನ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲನೆಯಲ್ಲಿದ್ದೇವೆ ಎಂದು ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಶಾಸಕ ನಂಜೇಗೌಡ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ.
ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ.
ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
ರಾಜ್ಯದ 14 ಹಾಲು ಒಕ್ಕೂಟಗಳು ಹಾಲಿವನ ದರ ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದ್ರೆ ಸರ್ಕಾರ ಕೇವಲ 3 ರೂಪಾಯಿ ಏರಿಕೆ ಮಾಡಿತ್ತು. ಅದೂ ಕೂಡಾ ಆ ಮೂರು ರೂಪಾಯಿ ನೇರವಾಗಿ ರೈತರಿಗೆ ನೀಡಲಾಗಿತ್ತು. ಹೀಗಾಗಿ ನಷ್ಟದಲ್ಲಿರುವುದರಿಂದ ದರ ಏರಿಕೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ.