ಬೆಂಗಳೂರು, ಮಾರ್ಚ್ 12, 2026: ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆ, ಗ್ರಂಥಾಲಯ ಸೇವೆಗಳು ಮತ್ತು ಜ್ಞಾನ ವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳ ಮೂಲಕ ಬ್ರಿಟಿಷ್ ಕೌನ್ಸಿಲ್ ಜೊತೆಗಿನ ಸಹಯೋಗವನ್ನು ಕರ್ನಾಟಕ ಸರ್ಕಾರ ವಿಸ್ತರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ವಿಸ್ತೃತ ಸಹಯೋಗದಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಲ್ಲಿ ಬ್ರಿಟಿಷ್ ಕೌನ್ಸಿಲ್ ಲೈಬ್ರರಿ ಕಾರ್ನರ್ಗಳ ಸಂಖ್ಯೆಯನ್ನು 10ರಿಂದ 70ಕ್ಕೆ ಹೆಚ್ಚಿಸಲಾಗುತ್ತದೆ, ರಾಜ್ಯಾದ್ಯಂತ 60 ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಈ ಯೋಜನೆಯ ಭಾಗವಾಗಿ ಬ್ರಿಟಿಷ್ ಕೌನ್ಸಿಲ್ 3,000 ಇಂಗ್ಲಿಷ್ ಮಕ್ಕಳ ಪುಸ್ತಕಗಳನ್ನು ಒದಗಿಸುವುದರ ಜೊತೆಗೆ ತನ್ನ ಡಿಜಿಟಲ್ ಗ್ರಂಥಾಲಯ ಸಂಪನ್ಮೂಲಗಳಿಗೆ ಉಚಿತ ಪ್ರವೇಶವನ್ನು ನೀಡಲಿದೆ, ಇದರಿಂದ ಗ್ರಾಮೀಣ ಓದುಗರಿಗೆ ಜಾಗತಿಕ ಜ್ಞಾನ ವೇದಿಕೆಗಳು ಹಾಗೂ ಇಂಗ್ಲಿಷ್ ಕಲಿಕೆಯ ವಿಷಯಗಳಿಗೆ ಪ್ರವೇಶ ಸಿಗಲಿದೆ.
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್ ಅವರ ಸಮ್ಮುಖದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಹಾಗೂ ಬ್ರಿಟಿಷ್ ಕೌನ್ಸಿಲ್ ದಕ್ಷಿಣ ಭಾರತದ ನಿರ್ದೇಶಕಿ ಜನಕ ಪುಷ್ಪನಾಥನ್ ವಿಸ್ತೃತ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಗ್ರಾಮೀಣ ಜ್ಞಾನ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಗ್ರಾಮೀಣ ಯುವಜನರಿಗೆ ಇಂಗ್ಲಿಷ್ ಕಲಿಕೆ ಅವಕಾಶಗಳನ್ನು ವಿಸ್ತರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ ಎಂದು ಹೇಳಿದರು.
“ಗ್ರಾಮ ಪಂಚಾಯತ್ ಗ್ರಂಥಾಲಯಗಳು ಇಂದು ಚೈತನ್ಯಶೀಲ ಅರಿವು ಕೇಂದ್ರಗಳಾಗಿ ರೂಪುಗೊಂಡಿವೆ. ಕೋವಿಡ್ ಸಮಯದಲ್ಲಿ ಈ ಗ್ರಂಥಾಲಯಗಳು ಮಕ್ಕಳಿಗೆ ಪ್ರಮುಖ ಕಲಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. 6ರಿಂದ 18 ವರ್ಷದ ಮಕ್ಕಳಿಗೆ ಉಚಿತ ಸದಸ್ಯತ್ವ ನೀಡುವ ಮೂಲಕ ಐದು ಮಿಲಿಯನ್ಗಿಂತ ಹೆಚ್ಚು ಯುವ ಓದುಗರನ್ನು ಈ ವ್ಯವಸ್ಥೆಗೆ ಸೇರಿಸಿದ್ದೇವೆ,” ಎಂದು ಅವರು ತಿಳಿಸಿದರು.
ಗ್ರಾಮೀಣ ಕರ್ನಾಟಕದ ಯುವಜನರಿಗೆ ಉನ್ನತ ಶಿಕ್ಷಣ, ಉದ್ಯೋಗಾವಕಾಶ ಮತ್ತು ಸಾಮಾಜಿಕ ಚಲನೆಗೆ ಇಂಗ್ಲಿಷ್ ಭಾಷಾ ಕೌಶಲ್ಯಗಳು ಪ್ರಮುಖವಾಗಿವೆ ಎಂದು ಸಚಿವರು ಹೇಳಿದರು.
“ಬ್ರಿಟಿಷ್ ಕೌನ್ಸಿಲ್ ಜೊತೆಗಿನ ಸಹಯೋಗದಿಂದ ಉತ್ತಮ ಗುಣಮಟ್ಟದ ಇಂಗ್ಲಿಷ್ ಕಲಿಕಾ ಸಂಪನ್ಮೂಲಗಳು, ಪುಸ್ತಕಗಳು ಹಾಗೂ ಡಿಜಿಟಲ್ ವಿಷಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳ ಬಳಿ ತಲುಪಿಸಲು ಸಾಧ್ಯವಾಗುತ್ತಿದೆ,” ಎಂದು ಅವರು ಹೇಳಿದರು.
2025ರ ಜನವರಿ 20ರಂದು ಆರಂಭಿಸಲಾದ ಮೊದಲ 10 ಬ್ರಿಟಿಷ್ ಕೌನ್ಸಿಲ್ ಲೈಬ್ರರಿ ಕಾರ್ನರ್ಗಳ ಯಶಸ್ಸು ಈ ಯೋಜನೆಯನ್ನು ರಾಜ್ಯಾದ್ಯಂತ 70 ಕೇಂದ್ರಗಳಿಗೆ ವಿಸ್ತರಿಸಲು ಪ್ರೇರಣೆ ನೀಡಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 5,884 ಗ್ರಾಮ ಪಂಚಾಯತ್ ಅರಿವು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಸುಮಾರು 6,600 ಗ್ರಾಮ ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ತಿಳಿಸಿದರು.
ಈ ಕೇಂದ್ರಗಳು ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಹೊಂದಿದ್ದು, ಡಿಜಿಟಲ್ ಕಲಿಕಾ ಸಂಪನ್ಮೂಲಗಳು, ಆನ್ಲೈನ್ ತರಬೇತಿ ಕಾರ್ಯಕ್ರಮಗಳು ಮತ್ತು ಶಿಕ್ಷಣ ಸಂಬಂಧಿತ ಮಾಹಿತಿಯನ್ನು ಸಾವಿರಾರು ಗ್ರಾಮಗಳ ಮಕ್ಕಳಿಗೆ ತಲುಪಿಸಲು ಸಹಾಯ ಮಾಡುತ್ತಿವೆ.
ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಹಕಾರಕ್ಕಾಗಿ ಬ್ರಿಟನ್ನ ಅಂತರರಾಷ್ಟ್ರೀಯ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಕಲಿಕೆ, ಕೌಶಲ್ಯ ಅಭಿವೃದ್ಧಿ ಮತ್ತು ಜ್ಞಾನ ವೃದ್ಧಿಗೆ ಬೆಂಬಲ ನೀಡಲು ಕರ್ನಾಟಕ ಸರ್ಕಾರದ ಜೊತೆ ಕೈಜೋಡಿಸಿರುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಪಂಚಾಯತ್ ರಾಜ್ ಕಾರ್ಯದರ್ಶಿ ರಣ್ದೀಪ್, ಹಾಗೂ ಬ್ರಿಟಿಷ್ ಕೌನ್ಸಿಲ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳಾದ ಅಲಿಸನ್ ಬ್ಯಾರೆಟ್ ಮತ್ತು ಹೆಲೆನ್ ಸಿಲ್ವೆಸ್ಟರ್ ಸೇರಿದಂತೆ ಹಲವರು ಭಾಗವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳ ಗ್ರಂಥಪಾಲಕರು ಪುಸ್ತಕಗಳನ್ನು ಸ್ವೀಕರಿಸಿದರು.
