ಬೆಳಗಾವಿ: ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸವಂತಮುರಿ ಗ್ರಾಮದ ಆದಿವಾಸಿ ಮಹಿಳೆ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣದಲ್ಲಿ 12 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಬೆಳಗಾವಿ ಜಿಲ್ಲಾ ನ್ಯಾಯಾಲಯ, ಎಲ್ಲ ಆರೋಪಿಗಳಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
2023ರ ಡಿಸೆಂಬರ್ 11ರಂದು ರಾತ್ರಿ ಸುಮಾರು 2 ಗಂಟೆ ವೇಳೆಗೆ, ಶೆಡ್ಯೂಲ್ ಟ್ರೈಬ್ ಸಮುದಾಯಕ್ಕೆ ಸೇರಿದ 42 ವರ್ಷದ ಮಹಿಳೆಯ ಮನೆಗೆ ಅಕ್ರಮವಾಗಿ ನುಗ್ಗಿದ ಆರೋಪಿಗಳು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಕೆಯ ಮಂಗಳಸೂತ್ರವನ್ನು ಕಿತ್ತುಕೊಂಡು, ಮನೆ ಹೊರಗೆ ಎಳೆದೊಯ್ದು, ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು. ಈ ಕೃತ್ಯವು ಮಹಿಳೆಯ ಗೌರವ, ಮಾನವೀಯತೆ ಮತ್ತು ಸಾಂವಿಧಾನಿಕ ಹಕ್ಕುಗಳಿಗೆ ಗಂಭೀರ ಧಕ್ಕೆ ತಂದಿತ್ತು.
ಈ ಪ್ರಕರಣವು ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ಸಂಭವಿಸಿದ್ದು, ದೂರುದಾರೆಯ ಪುತ್ರನು ಆರೋಪಿಗಳ ಕುಟುಂಬದ ಯುವತಿಯೊಂದಿಗೆ ಓಡಿಹೋಗಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಸಂಚು ರೂಪಿಸಿ ಈ ದಾಳಿ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಡಿಸೆಂಬರ್ 16, 2023ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಸಿಐಡಿ ವಿಶೇಷ ತನಿಖಾ ವಿಭಾಗದ ಎಸ್ಪಿ ಪೃಥ್ವಿಕ್ ಶಂಕರ್ (ಐಪಿಎಸ್) ನೇತೃತ್ವದಲ್ಲಿ ನಡೆಸಿದ ಸಮಗ್ರ ತನಿಖೆಯಲ್ಲಿ 92 ಸಾಕ್ಷಿಗಳನ್ನು ಉಲ್ಲೇಖಿಸಿ, 37 ವಸ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ 2024ರ ಏಪ್ರಿಲ್ 22ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡು, ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶಿಸಿತ್ತು.
ವಿಚಾರಣೆಯ ವೇಳೆ 45 ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪಿಗಳ ವಿರುದ್ಧದ ಸಾಕ್ಷ್ಯಗಳು ನಂಬಲರ್ಹವಾಗಿವೆ ಎಂದು ತೀರ್ಮಾನಿಸಿ, ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ (109, 114, 117, 143, 148, 307, 323, 324, 326, 341, 342, 353, 354, 354B, 355, 392, 427, 452, 504 and 506 ಸೇರಿದಂತೆ) ಎಲ್ಲಾ 12 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ. ಪ್ರತಿಯೊಬ್ಬ ಆರೋಪಿಗೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಸಿಐಡಿ ಹಿರಿಯ ಅಧಿಕಾರಿಗಳು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದು, ವಿಶೇಷ ಸರ್ಕಾರಿ ಅಭಿಯೋಜಕರ ಮೂಲಕ ಪರಿಣಾಮಕಾರಿ ವಾದ ಮಂಡನೆ ನಡೆದಿತ್ತು. ಈ ತೀರ್ಪು, ಆದಿವಾಸಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ವಿರುದ್ಧವಾಗಿ ನ್ಯಾಯಾಂಗದ ಕಠಿಣ ಸಂದೇಶವೆಂದು ಪರಿಗಣಿಸಲಾಗಿದೆ.
