ಬೆಂಗಳೂರು / ತಿರುವನಂತಪುರಂ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ನಡೆದ ಬಹುವರ್ಷಗಳ ನಂತರದ ದೊಡ್ಡ ಒತ್ತುವರಿ ತೆರವು ಕಾರ್ಯಾಚರಣೆ, ಇದೀಗ ಕೇವಲ ನಗರಮಟ್ಟಕ್ಕೆ ಸೀಮಿತವಾಗದೆ ರಾಜ್ಯಾಂತರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ನಡೆದ ಈ ಕಾರ್ಯಾಚರಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಲಾಗಿದೆ. ಈ ಕ್ರಮವನ್ನು ನಗರದಲ್ಲಿ ಅಕ್ರಮ ಒತ್ತುವರಿಗಳ ವಿರುದ್ಧ ಸರ್ಕಾರ ಕೈಗೊಂಡ ಅಗತ್ಯ ಕ್ರಮ ಎಂದು ಹಲವರು ಸ್ವಾಗತಿಸಿದ್ದರೆ, ಮತ್ತೊಂದೆಡೆ ನಿರ್ಗತಿಕ ನಿವಾಸಿಗಳ ಮಾನವೀಯ ಸ್ಥಿತಿಯ ಕುರಿತ ಚರ್ಚೆಯೂ ಆರಂಭವಾಗಿದೆ.
ಆದರೆ ಈ ವಿಚಾರಕ್ಕೆ ಹೊಸ ತಿರುವು ಸಿಕ್ಕಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಕಾರ್ಯಾಚರಣೆಯನ್ನು ‘ಬುಲ್ಡೋಜರ್ ರಾಜ್’ ಎಂದು ಟೀಕಿಸಿದ ನಂತರ. ಮುಂಬರುವ ಕೇರಳ ವಿಧಾನಸಭೆ ಚುನಾವಣೆಯ ಹಿನ್ನೆಲೆ ಈ ಹೇಳಿಕೆಗಳನ್ನು ರಾಜಕೀಯ ದೃಷ್ಟಿಯಿಂದಲೇ ನೋಡಲಾಗುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಕೇರಳ ಸಿಪಿಐಎಂ ರಾಜ್ಯಸಭಾ ಸದಸ್ಯ ಎ.ಎ. ರಹೀಂ ಅವರು ಕೋಗಿಲು ಲೇಔಟ್ಗೆ ಭೇಟಿ ನೀಡಿ, ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿ, ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಕ್ಕೆ ಇನ್ನಷ್ಟು ಬೆಂಕಿ ಹಚ್ಚಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಈ ವಿಚಾರದ ಬಗ್ಗೆ ವರದಿ ಕೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂಪರ್ಕಿಸಿ ವಿವರಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ ವರದಿಯಲ್ಲಿ,
- ಕೋಗಿಲು ಲೇಔಟ್ನಲ್ಲಿರುವ ಜಾಗ ಬಿಬಿಎಂಪಿಗೆ ಸೇರಿದ ಐದು ಎಕರೆ ಸರ್ಕಾರಿ ಜಾಗ
- ಅದನ್ನು ತ್ಯಾಜ್ಯ ವಿಲೇವಾರಿ (ವೆಸ್ಟ್ ಮ್ಯಾನೇಜ್ಮೆಂಟ್) ಉದ್ದೇಶಕ್ಕೆ ಮೀಸಲಿಟ್ಟಿತ್ತು
- ಅಕ್ರಮವಾಗಿ ಮನೆ ನಿರ್ಮಾಣಗೊಂಡಿದ್ದ ಕಾರಣ ಕಾನೂನುಬದ್ಧವಾಗಿ ಒತ್ತುವರಿ ತೆರವು ನಡೆಸಲಾಗಿದೆ
ಎಂದು ಸ್ಪಷ್ಟಪಡಿಸಲಾಗಿದೆ. ದುರ್ಘಟನೆ ಎಂದರೆ, ಒತ್ತುವರಿ ಮಾಡಿಕೊಂಡವರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಅದನ್ನು ರಾಜಕೀಯವಾಗಿ ಬಣ್ಣಿಸಲಾಗುತ್ತಿದೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,
ಒತ್ತುವರಿ ತೆರವು ಅನಿವಾರ್ಯವಾಗಿತ್ತು, ಆದರೆ ಮಾನವೀಯ ದೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೀಗ, ಬೆಂಗಳೂರು ನಗರದಲ್ಲಿ ನಡೆದ ಕಾನೂನು ಕ್ರಮವು ಕೇರಳ ರಾಜಕೀಯದಲ್ಲಿ ಚುನಾವಣಾ ಅಸ್ತ್ರವಾಗಿದೆಯೇ? ಎಂಬ ಪ್ರಶ್ನೆಗಳು ಮೂಡಿದ್ದು, ಈ ವಿಚಾರದ ಮೇಲಿನ ಚರ್ಚೆ ಮುಂದುವರಿದಿದೆ.
