ಬೆಂಗಳೂರು: ನಗರದ ಬಾಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ದುಸ್ಸಾಹಸಿ ಕಳ್ಳನೊಬ್ಬ ಬೀಗ ಒಡೆದೆ ಮನೆಗೆ ನುಗ್ಗಿ ಸುಮಾರು ₹45 ಲಕ್ಷ ಮೌಲ್ಯದ ಆಭರಣ, ಬೆಳ್ಳಿ ಸಾಮಾನು ಹಾಗೂ ನಗದು ಕದ್ದೊಯ್ದಿದ್ದಾನೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಳ್ಳನು ಡೋರ್ ಲಾಕ್ ಸ್ಕ್ರೂ ಬಿಚ್ಚುವ ವಿಧಾನ ಬಳಸಿಕೊಂಡು ಮನೆಯೊಳಗೆ ನುಗ್ಗಿದ್ದಾನೆ. ಬಳಿಕ 300 ಗ್ರಾಂ ಚಿನ್ನಾಭರಣ, ₹10 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ₹3 ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ.
ಘಟನೆ ಸಂಭವಿಸಿದ ವೇಳೆ ಮನೆಯವರು ಕುಟುಂಬದ ಅಂತ್ಯಕ್ರಿಯೆಗೆ ಊರಿಗೆ ತೆರಳಿದ್ದ ಕಾರಣ ಮನೆ ಖಾಲಿ ಇತ್ತು. “ಮಗನ ಮದುವೆಗೆ ಇಟ್ಟಿದ್ದ ಆಭರಣ, ನಗದು ಎಲ್ಲವೂ ಕಳ್ಳತನವಾಗಿದೆ. ಮಧ್ಯಮ ವರ್ಗದ ನಮ್ಮಂತಹವರಿಗೆ ಇದು ದೊಡ್ಡ ಆಘಾತ,” ಎಂದು ಕುಟುಂಬ ಸದಸ್ಯರು ವ್ಯಥೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇತ್ತೀಚಿನ ದಿನಗಳಲ್ಲಿ ನೈಟ್ ಬೀಟ್ ಮತ್ತು ಪೆಟ್ರೋಲಿಂಗ್ ಕಡಿಮೆಯಾಗಿರುವುದರಿಂದ ಹಳೆಯ ಬಡಾವಣೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿದ್ದಾರೆ.
ನಿವಾಸಿಗಳು ಪೆಟ್ರೋಲಿಂಗ್ ಹೆಚ್ಚಿಸುವುದು, ಬೀಟ್ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಎಚ್ಚರಿಕೆ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯ ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.