ಬೆಂಗಳೂರು: ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಮಾಜಿ ರೌಡಿಶೀಟರ್ ಯಶಸ್ವಿನಿ ಗೌಡ (47) ಅವರನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣವು ಉದ್ಯಮಿ ಹೆಚ್.ವಿ. ಮನೋಜ್ ಕುಮಾರ್ ಅವರ ಅಪಹರಣ ಹಾಗೂ ಸುಲಿಗೆಗೆ ಸಂಬಂಧಿಸಿದೆ. ಕಳೆದ ಆಗಸ್ಟ್ನಲ್ಲಿ ಈ ಪ್ರಕರಣದಲ್ಲಿ ರಾಜೇಶ್, ಸೀನಾ ಅಲಿಯಾಸ್ ಬಾಂಬೆ ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಹಾಗೂ ಯುಕೇಶ್ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ತನಿಖೆ ವೇಳೆ, ಈ ಪ್ರಕರಣದಲ್ಲಿ ರೌಡಿಶೀಟರ್ ಬೇಕರಿ ರಘು ಕೈವಾಡವಿರುವುದು ಪತ್ತೆಯಾಗಿದ್ದು, ಆತನನ್ನು ಇತ್ತೀಚೆಗೆ ಮಂಡ್ಯದಲ್ಲಿ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರು ಬಂಧನ ಕಾರ್ಯಾಚರಣೆಗೆ ತೆರಳಿದಾಗ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಯಶಸ್ವಿನಿ ಗೌಡ ವಿರುದ್ಧ ಮಂಡ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆ ಪ್ರಕರಣದ ಆಧಾರದಲ್ಲಿ ಸಿಸಿಬಿ ಬಂಧನ ಕೈಗೊಂಡಿದೆ.
ಪ್ರಕರಣದ ಹಿನ್ನೆಲೆ
ಪೊಲೀಸರ ಮಾಹಿತಿಯಂತೆ, ಉದ್ಯಮಿ ಮನೋಜ್ ಕುಮಾರ್ ಅವರಿಗೆ ಪರಿಚಿತನಾಗಿದ್ದ ರಾಜೇಶ್, ಖ್ಯಾತ ಸಿನಿಮಾ ನಿರ್ದೇಶಕರೊಬ್ಬರಿಗೆ ₹1.20 ಲಕ್ಷ ಸಾಲ ನೀಡಿದ್ದ. ಆದರೆ ಒಂದು ವರ್ಷ ಕಳೆದರೂ ಸಾಲದ ಹಣ ಹಿಂತಿರುಗಿಸದ ಹಿನ್ನೆಲೆ, ಮನೋಜ್ ಕುಮಾರ್ ಅವರು ರಾಜೇಶ್ ಮೇಲೆ ಒತ್ತಡ ಹೇರಿದ್ದರು.
ಡ್ಯಾಗರ್ ತೋರಿಸಿ ಹಣ ವರ್ಗಾವಣೆ
ಆಗಸ್ಟ್ 26ರಂದು ಸಂಜೆ 6.30ರ ಸುಮಾರಿಗೆ, ಹಣ ನೀಡುವುದಾಗಿ ಹೇಳಿ ರಾಜೇಶ್, ಮನೋಜ್ ಕುಮಾರ್ ಅವರನ್ನು ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್ಗೆ ಕರೆಸಿಕೊಂಡಿದ್ದಾನೆ. ಬಳಿಕ “ದೊಡ್ಡವರು ಹಣ ಕೊಡುತ್ತಾರೆ” ಎಂದು ಹೇಳಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ.
ಮಾರ್ಗಮಧ್ಯೆ, ಮನೋಜ್ ಕುಮಾರ್ ಅವರನ್ನು ಮತ್ತೊಂದು ಕಾರಿಗೆ ಬಲವಂತವಾಗಿ ಕೂರಿಸಿ ಅಪಹರಿಸಲಾಗಿದೆ. ನಗರದ ವಿವಿಧೆಡೆ ಸುತ್ತಾಡಿಸಿ, ಡ್ಯಾಗರ್ ತೋರಿಸಿ ಬೆದರಿಸಿ, ಅವರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ₹2.96 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕವೂ ಆರೋಪಿಗಳು ₹10 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ನೀಡುವುದಾಗಿ ಮನೋಜ್ ಕುಮಾರ್ ಒಪ್ಪಿಕೊಂಡ ನಂತರ, ಮುಂದಿನ ದಿನ ಮಧ್ಯಾಹ್ನ ಅವರನ್ನು ಜ್ಞಾನಭಾರತಿ ಕ್ಯಾಂಪಸ್ ಬಳಿ ಕಾರಿನಿಂದ ಇಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಮನೋಜ್ ಕುಮಾರ್ ಅವರು ಸಿಸಿಬಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.
