Home ಬೆಂಗಳೂರು ನಗರ ಉದ್ಯಮಿಗಳು ನೆರೆ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಬೇಕು: ಡಿ.ಕೆ. ಶಿವಕುಮಾರ್

ಉದ್ಯಮಿಗಳು ನೆರೆ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಬೇಕು: ಡಿ.ಕೆ. ಶಿವಕುಮಾರ್

32
0

ಬೆಂಗಳೂರು: ಪ್ರಪಂಚವೇ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ನಮ್ಮ ಸರಕಾರ ಬೆಂಗಳೂರಿನ ಅಭಿವೃದ್ಧಿಗೆ ಬದ್ಧವಾಗಿದೆ. ಉದ್ಯಮಿಗಳು, ನೌಕರರು ಬೆಂಗಳೂರು ಬಿಟ್ಟು ನೆರೆಯ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಶುಕ್ರವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ಬೆಂಗಳೂರು ಟೆಕ್ ಶೃಂಗಸಭೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಐಟಿ ಬಿಟಿ ಕ್ಷೇತ್ರದ ಪ್ರಮುಖರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಯಾವ ಸರಕಾರ ಈ ರೀತಿಯ ಬದ್ದತೆ ಹೊಂದಿದೆ ಎಂಬುದನ್ನು ನೀವು ಅರಿಯಬೇಕು. ಸಚಿವ ಪ್ರಿಯಾಂಕ್ ಖರ್ಗೆ ಈ ಇಲಾಖೆಯಿಂದ ಕೈಗೊಂಡಿರುವ ಕಾರ್ಯಗಳ ಬಗ್ಗೆ ಹೊರ ತಂದಿರುವ ಕಿರುಹೊತ್ತಿಗೆ ಇದಕ್ಕೆ ಸಾಕ್ಷಿ. ಉದ್ಯೋಗದಾತರು ಬಲಗೊಂಡಷ್ಟು ನೌಕರರ ಶಕ್ತಿಯೂ ಹೆಚ್ಚುತ್ತದೆ. ಆರ್ಥಿಕತೆಯೂ ಬಲಗೊಳ್ಳುತ್ತದೆ, ದೇಶದ ಶಕ್ತಿಯೂ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.

ಉದ್ಯಮಿಗಳು ನಮ್ಮ ಶಕ್ತಿಯ ರಾಯಭಾರಿಗಳು. ಬೆಂಗಳೂರು ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ನಾಡಪ್ರಭು ಕೆಂಪೇಗೌಡರಿಗೂ ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎನ್ನುವ ಕಲ್ಪನೆಯೇ ಇರಲಿಲ್ಲ. ಸುಮಾರು 1.4 ಕೋಟಿ ಜನಸಂಖ್ಯೆಯಿದ್ದು ದೇಶದ ನಾನಾ ಕಡೆಗಳಿಂದ ಜನರು ಬರುತ್ತಿರುವುದನ್ನು ತಪ್ಪಿಸಿ ನಗರದ ಮೇಲಿನ ಒತ್ತಡ ಕಡಿಮೆ ಮಾಡಬೇಕಾಗಿದೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದ ಎಲ್ಲ ಭಾಗಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಗ್ರಾಮೀಣ ಭಾಗದ ಶಿಕ್ಷಣಕ್ಕೆ ಸುಮಾರು 8 ಸಾವಿರ ಕೋಟಿ ರೂ. ಸಿಎಸ್‍ಆರ್ ಹಣ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

200ಕ್ಕೂ ಹೆಚ್ಚು ಎಂಜಿನಿಯರಿಂಗ್, 70ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು ಅತ್ಯುತ್ತಮ ಸಾಮಥ್ರ್ಯ ಹೊಂದಿರುವ ವಿದ್ಯಾರ್ಥಿಗಳು ಪ್ರತಿ ವರ್ಷ ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಅಗಾಧ ಮಾನವ ಸಂಪನ್ಮೂಲ ನಮ್ಮಲ್ಲಿದೆ. ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದಿದ್ದೇವೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭಿಗಳಾಗಿದ್ದೇವೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here