ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಗಣಿ ಗುತ್ತಿಗೆ ಅನುಮತಿ ಆರೋಪ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಸಲಹೆಯನ್ನು ನೀಡಲು ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್, ಸಂವಿಧಾನದ ಆರ್ಟಿಕಲ್ 163ರ ಅನ್ವಯ ಸಂಪುಟದ ಅಧಿಕಾರವನ್ನು ಬಳಸಿಕೊಂಡು ಸಂಪುಟ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ರಾಜ್ಯಪಾಲರ ಮುಂದೆ ಭ್ರಷ್ಟಾಚಾರ ತಡೆ ಕಾಯ್ದೆ 1980 ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅನುಮತಿ ಅರ್ಜಿ ಬಾಕಿ ಇದ್ದು, ಎಚ್‍ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿತ್ತು ಎಂದು ವಿವರಣೆ ನೀಡಿದರು.
ಅದರಲ್ಲೂ, ಕುಮಾರಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಲೋಕಾಯುಕ್ತ ಎಸ್‌ಐಟಿಗೆ ಸ್ಪಷ್ಟೀಕರಣ ಕೋರಿ ಕೇಳಿದ್ದರು. ಇದಕ್ಕೆ ಅಗತ್ಯವಿರುವ ಸ್ಪಷ್ಟೀಕರಣವನ್ನು ಪತ್ರ ಎಸ್‌ಐಟಿ ನೀಡಿದೆ. ಇದೀಗ ಸಂಪುಟದಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಾಸಿಕ್ಯೂಷನ್ ಬಗ್ಗೆ ಶೀಘ್ರವಾಗಿ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಆರ್ಟಿಕಲ್ 163ರ ಅನ್ವಯ ನೆರವು ಹಾಗೂ ಸಲಹೆ ನೀಡುವ ಸಂಪುಟ ಅಧಿಕಾರವನ್ನು ಬಳಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೂ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದರು. ಈ ಬಗ್ಗೆ ತರಾತುರಿಯಲ್ಲಿ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಆದರೆ ಈ ನಾಲ್ಕು ಪ್ರಕರಣದಲ್ಲಿ ತನಿಖೆ ಆಗಿದೆ ಹಾಗೂ ಎರಡು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಆಗಿದೆ. ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದರೂ ಏನೂ ಕ್ರಮ ಆಗಿಲ್ಲ. ಹೀಗಿರುವಾಗ ಕ್ಯಾಬಿನೆಟ್ ಈ ಸಲಹೆ ಕೊಡುವುದು ಸೂಕ್ತ ಎಂದು ಅವರು ವಿಶ್ಲೇಷಿಸಿದರು.
ಅದು ಅಲ್ಲದೆ, ಜನ ಸಂಘಟನೆಗಳು ಈ ಆಗ್ರಹ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದ್ದು, ಇದರಲ್ಲಿ ಯಾವುದೇ ದ್ವೇಷದ ರಾಜಕಾರಣ ಇಲ್ಲ ಎಂದು ಸಚಿವರು ಸಮಜಾಯಿಷಿ ನೀಡಿದರು.
ಕುಮಾರಸ್ವಾಮಿ ಗಣಿ ಅಕ್ರಮ?: ಗಣಿ ಅಕ್ರಮ ಪ್ರಕರಣದಲ್ಲಿ 2014ರಿಂದ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ದ ವಿಚಾರಣೆ ನಡೆದಿದೆ. ತನಿಖೆ ನಡೆಸಿರುವ ಲೋಕಾಯುಕ್ತ, ಎಸ್‌ಐಟಿ, ಕುಮಾರಸ್ವಾಮಿ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಬಂದಿದೆ. ಸ್ವತಃ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಲು 10 ತಿಂಗಳ ಹಿಂದೆಯೇ ಮನವಿ ಮಾಡಲಾಗಿತ್ತು. ಆದರೂ, ಇದುವರೆಗೂ ಆ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಶಶಿಕಲಾ ಜೊಲ್ಲೆ ಮೊಟ್ಟೆ ಪ್ರಕರಣ?: 2021ನೆ ಸಾಲಿನಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ದ ದೂರು ನೀಡಲಾಗಿತ್ತು. ಮೊಟ್ಟೆ ಅಕ್ರಮ ಟೆಂಡರ್ ಪ್ರಕರಣದಲ್ಲಿ ಅಕ್ರಮ ಎಸಗಿರುವ ಆರೋಪ ಇದಾಗಿದೆ. ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಅಡಿಯಲ್ಲಿ ದೂರು ಸಹ ದಾಖಲಾಗಿತ್ತು.
ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಸಂಪತ್ತಿನ ಪ್ರಕರಣ?: ಮೇ.13ರಂದು ಜನಾರ್ಧನ ರೆಡ್ಡಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡಿ ಎಂದು ಮನವಿ ಮಾಡಲಾಗಿತ್ತು.
ಮುರಗೇಶ್ ನಿರಾಣಿ ವಿಡಿಯೋ ಚಿತ್ರಿಕರಣ?: ಫೆ.26ರಂದು ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಇನ್ವೆಸ್ಟ್ ಕರ್ನಾಟಕ ವಿಡಿಯೊ ಚಿತ್ರೀಕರಣ ಅಕ್ರಮ ಕುರಿತ ವಿಚಾರಣೆಗೆ ಅನುಮತಿ ಕೋರಲಾಗಿತ್ತು. ಆದರೆ, ಇದುವರೆಗೂ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ.