ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಈ ವಿಷಯವನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಭದ್ರತಾ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಅನುಸರಿಸಲು ಗೃಹ ಇಲಾಖೆಗೆ ವಿಶೇಷ ಆದೇಶ ಹೊರಡಿಸುವ ಜವಾಬ್ದಾರಿ ನೀಡಲಾಗಿದೆ ಎಂದರು. ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಹಾಗೂ ಮಹೇಶ್ವರ ರಾವ್ ನೇತೃತ್ವದ ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಆಧಾರವಾಗಿಸಿಕೊಂಡು ಗೃಹ ಇಲಾಖೆ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಯುವಕರು ಹಾಗೂ ಕ್ರಿಕೆಟ್ ಅಭಿಮಾನಿಗಳ ಹಿತದೃಷ್ಟಿಯಿಂದ ಸರ್ಕಾರ ಐಪಿಎಲ್ ಪಂದ್ಯಗಳಿಗೆ ಅನುಮತಿ ನೀಡಿದೆ ಎಂದು ತಿಳಿಸಿದರು. ಆದರೆ, ಈ ಅನುಮತಿ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕ್ರೀಡಾಂಗಣದ ಆಸನ ಸಾಮರ್ಥ್ಯದಷ್ಟೇ ಟಿಕೆಟ್ ಮಾರಾಟ ಮಾಡಬೇಕು, ಜನದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಪ್ರಮಾಣದ ದೊಡ್ಡ ಗೇಟ್ಗಳನ್ನು ಅಳವಡಿಸಬೇಕು, ಆಂಬುಲೆನ್ಸ್ಗಳನ್ನು ನಿಯೋಜಿಸಬೇಕು ಹಾಗೂ ಕುನ್ಹಾ ಸಮಿತಿ ಶಿಫಾರಸ್ಸಿನಂತೆ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ.
“ಕ್ರಿಕೆಟ್ ಪ್ರಿಯರಿಗೆ ಇದು ಶುಭ ಸುದ್ದಿ. ಕಳೆದ ಅವಧಿಯಲ್ಲಿ ಉಂಟಾದ ಅಸೌಕರ್ಯಗಳಿಗೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದಿನ ಬಾರಿ ಯಾವುದೇ ರೀತಿಯ ಅಜಾಗರೂಕತೆ ನಡೆಯದಂತೆ ಎಚ್ಚರಿಕೆಯಿಂದ ಮುಂದುವರೆಯುತ್ತೇವೆ,” ಎಂದು ಶಿವಕುಮಾರ್ ಹೇಳಿದರು.
ಸರ್ಕಾರದ ಈ ತೀರ್ಮಾನದಿಂದ ಬೆಂಗಳೂರಿನ ಐಪಿಎಲ್ ಆತಿಥ್ಯ ಮತ್ತೆ ಸಕ್ರಿಯವಾಗಲಿದ್ದು, ಭದ್ರತೆ ಮತ್ತು ವ್ಯವಸ್ಥಾಪನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂಬ ಸಂದೇಶ ನೀಡಲಾಗಿದೆ.
