ಚುನಾವಣೆ ಮುಂದೂಡಲು ತಂತ್ರ
ಬೆಂಗಳೂರು:
ಬಿಬಿಎಂಪಿ ವಾರ್ಡಗಳ ಮರು ವಿಂಗಡನೆ ಮಾಡಿ ಚುನಾವಣೆ ಮುಂದೂಡುವ ಹುನ್ನಾರಿನಲ್ಲಿರುವ ಸರ್ಕಾರಕ್ಕೆ ಒಂದೆಡೆ ಹೈಕೋರ್ಟ್ ತೀರ್ಪು ಚುನಾವಣೆ ನಡೆಸುವ ಅನಿವಾರ್ಯತೆ ಸೃಷ್ಟಿಸಿದೆ. ಹೀಗಾಗಿ ಬಿಬಿಎಂಪಿಗೆ ಮತ್ತಷ್ಟು ಗ್ರಾಮಗಳನ್ನು ಸೇರ್ಪಡೆಗೊಳಿಸುವ ಮೂಲಕ ವಾರ್ಡ ಮರು ವಿಂಗಡಣೆ ಮಾಡಿ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸದಂತೆ ತಡೆಯಲು ತಂತ್ರ ರೂಪಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಗೆ ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಗೆ ಸೇರಿದ ಲಕ್ಷ್ಮೀಪುರ ಕಂದಾಯ ಗ್ರಾಮ, ಕಾನ್ಷರಾಂ ನಗರ, ಲಕ್ಷ್ಮೀಪುರದ ಎಲ್ಲಾ ಬಡಾವಣೆಗಳನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನಂ 12ಕ್ಕೆ ಸೇರ್ಪಡೆ, ಮಲ್ಲಸಂದ್ರ ಹಾಗೂ ಉತ್ತರ ಹಳ್ಳಿ ಮನವರ್ತೆ ಕಾವಲ್ ಗ್ರಾಮದ ಭಾಗಶಃ ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಮೂಲಕ ಹೈಕೋರ್ಟ್ ಹಾಲಿ 198 ವಾರ್ಡಗಳಿಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದರೂ ಹೊಸ ಆದೇಶವನ್ನು ಮುಂದಿಟ್ಟುಕೊಂಡು,ಹಾಗೂ ಬಿಬಿಎಂಪಿ ವಾರ್ಡ್ ಗಳ ಮರು ವಿಂಗಡಣೆ ಮಾಡಲು ಸರ್ಕಾರ ಕಾರ್ಯೋನ್ಮುಖವಾಗಿದೆ. ವಿಧಾನ ಮಂಡಲ ಉಪ ಸಮಿತಿ ವರದಿ ಆಧಾರದ ಮೇಲೆ ವಾರ್ಡ್ ಮರು ವಿಂಗಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಮುಂದಿರುವ ಲೆಕ್ಕಾಚಾರವಾಗಿದೆ.