ಬೆಂಗಳೂರು: ಪ್ರಜ್ವಲ್ ರೇವಣ್ಣನ ಡಿಪ್ಲೋಮಟ್ ಪಾಸ್ಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿರುವ ಕುರಿತು ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಹಾಸನದ ಸಂಸದ ಮತ್ತು ಎನ್ಡಿಎ ಅಭ್ಯರ್ಥಿ. ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ. ಈ ಗಂಭೀರ ಪ್ರಕರಣದ ಬಗ್ಗೆ ನಿಮಗೂ ತಿಳಿದಿರಬಹುದು. ಅವರ ವಿರುದ್ಧದ ಆರೋಪಗಳು ಭಯಾನಕ ಮತ್ತು ನಾಚಿಗೇಡಿನದ್ದು. ಇದು ದೇಶದ ಆತ್ಮ ಸಾಕ್ಷಿಯನ್ನೆ ಅಲ್ಲಾಡಿಸಿದ ಪ್ರಕರಣ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.
ನಾವು ಎಸ್ಐಟಿ ರಚಿಸಿದ್ದೇವೆ. ಎಸ್ಐಟಿ ತಂಡ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ. ಇದು ಹೊರ ಬಿದ್ದ ಕೂಡಲೆ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜ್ವಲ್ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ನಲ್ಲಿ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ತಿಳಿದು ಬಂದಿದೆ. ಎಸ್ಐಟಿ ತನಿಖೆ ನಡೆಯುತ್ತಿರುವ ಸಂಬಂಧ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಿ ಅಲ್ಲದೆ ಅಂತರಾಷ್ಟ್ರೀಯ ಏಜೆನ್ಸಿ ಮೂಲಕ ಪ್ರಜ್ವಲ್ ರೇವಣ್ಣ ಕರೆತರಲು ಸಹಕರಿಸಿ. ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಬೇಕು. ಪ್ರಜ್ವಲ್ ಕರೆತರಲು ಬೇಕಾದ ಎಲ್ಲಾ ರೀತಿಯ ನೆರವು ಹಾಗೂ ಮಾಹಿತಿಯನ್ನ ನಮ್ಮ ಎಸ್ಐಟಿ ತಂಡ ಒದಗಿಸಲಿದೆ, ಸಹಕರಿಸಲಿದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.