ಬೆಂಗಳೂರು, ಫೆ. 09: ಕಾಂಗ್ರೆಸ್ ಪಕ್ಷದ ಕರೆಯ ಮೇರೆಗೆ ದೆಹಲಿಗೆ ತೆರಳಿ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ದೆಹಲಿ ಪ್ರವಾಸವು ಕೇವಲ ರಾಜಕೀಯ ಚರ್ಚೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದೇನೆ. ಈ ಪ್ರವಾಸದ ವೇಳೆ ರಾಜಕೀಯ ವಿಚಾರಗಳ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಕಾನೂನು ತಜ್ಞರನ್ನು ಸಹ ಭೇಟಿ ಮಾಡುತ್ತಿದ್ದೇನೆ,” ಎಂದು ಶಿವಕುಮಾರ್ ಹೇಳಿದರು.
ನಾಯಕರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ
ರಾಹುಲ್ ಗಾಂಧಿ ನಿಮ್ಮನ್ನು ದೆಹಲಿಗೆ ಕರೆಯುತ್ತಿದ್ದಾರೆಯೇ? ಹಾಗೂ ನೀವು ಯಾರನ್ನು ಭೇಟಿಯಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
“ನಾನು ಯಾರನ್ನು ಯಾರನ್ನು ಭೇಟಿಯಾಗುತ್ತಿದ್ದೇನೆ ಎನ್ನುವ ಎಲ್ಲಾ ಹೆಸರನ್ನು ಹೇಳಲು ಆಗುವುದಿಲ್ಲ. ನಿಮಗೆ ಏಕೆ ಇಷ್ಟು ಕುತೂಹಲ?” ಎಂದು ಪ್ರಶ್ನಿಸಿದ ಅವರು, ತಮ್ಮ ಪಕ್ಷೀಯ ಹೊಣೆಗಾರಿಕೆಯನ್ನು ವಿವರಿಸಿದರು.
“ನಾನು ಕೇವಲ ಉಪಮುಖ್ಯಮಂತ್ರಿಯಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷನೂ ಹೌದು. ಮಾರ್ಚ್ 10ಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಆರು ವರ್ಷ ಪೂರ್ಣಗೊಳ್ಳುತ್ತದೆ. ನಮ್ಮ ಸಂಸದರು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ಭೇಟಿ ಸಂದರ್ಭದಲ್ಲಿ ನನ್ನ ಕಷ್ಟ, ದುಃಖ, ನಿಮ್ಮ ಸಂತೋಷ, ಆಶಯಗಳನ್ನೆಲ್ಲ ಹಂಚಿಕೊಳ್ಳುತ್ತೇನೆ,” ಎಂದರು.
ಸಿಎಂ ಅನುಮತಿ ಪಡೆದು ದೆಹಲಿಗೆ ತೆರಳುತ್ತೇನೆ
ಬಜೆಟ್ ಪೂರ್ವಸಿದ್ಧತಾ ಸಭೆಗಳ ನಡುವೆಯೇ ದೆಹಲಿಗೆ ಹೋಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ಅನುಮತಿ ಪಡೆದು ಮಾತ್ರ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.
“ನಾನು ಸಿಎಂ ಅವರ ಅನುಮತಿ ಪಡೆದುಕೊಳ್ಳುತ್ತೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ಮಂಗಳವಾರ ನಡೆಯುವ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನನಗಿಂತ ಸಿಎಂ ಅವರಿಗೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ತಿಳಿದಿದೆ,” ಎಂದು ಹೇಳಿದರು.
ಮೇಕೆದಾಟು ಯೋಜನೆ ಸಂಬಂಧ ಅಧಿಕಾರಿಗಳು ಈಗಾಗಲೇ ಭೇಟಿ ಮಾಡಿದ್ದು, ಆಡಳಿತಾತ್ಮಕ ಕಾರ್ಯಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದರು.
