ನಾಗ್ಪುರ:
ದೇಶವ್ಯಾಪಿ ಜಾತಿಗಣತಿ ನಡೆಸುವ ವಿಚಾರದಲ್ಲಿ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ತೆಗೆದುಕೊಂಡಿರುವ ನಿಲುವನ್ನು ಆರೆಸ್ಸೆಸ್ ಬಲವಾಗಿ ವಿರೋಧಿಸಿದೆ. ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಶಾಸಕರು ಸಂಘದ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿ ನಡೆಸಿದ ಸಭೆಯ ವೇಳೆ ಜಾತಿಗಣತಿಗೆ ತಮ್ಮ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದರು.
ಆರೆಸ್ಸೆಸ್ ವಿದರ್ಭ ಪ್ರದೇಶದ ಮುಖ್ಯಸ್ಥ ಶ್ರೀಧರ್ ಗಾಡ್ಗೆ ಮಾತನಾಡಿ, ಜಾತಿ ಗಣತಿ ಕೆಲ ರಾಜಕೀಯ ಪಕ್ಷಗಳಿಗೆ ಪ್ರಯೋಜನವಾಗಬಹುದು; ಏಕೆಂದರೆ ಅದು ನಿರ್ದಿಷ್ಟ ಜಾತಿಯ ಸಂಯೋಜನೆ ಬಗ್ಗೆ ಅಂಕಿ ಅಂಶಗಳನ್ನು ನೀಡುತ್ತದೆ. ಆದರೆ ವಾಸ್ತವವಾಗಿ ಇದು ರಾಷ್ಟ್ರೀಯ ಏಕತೆಗೆ ಮಾರಕ ಎಂದು ಅಭಿಪ್ರಾಯಪಟ್ಟರು.
ಗಮನಾರ್ಹ ಅಂಶವೆಂದರೆ ಗೃಹ ಸಚಿವ ಅಮಿತ್ ಶಾ ಈ ಮುನ್ನ ಹೇಳಿಕೆ ನೀಡಿ, ಜಾತಿ ಆಧರಿತ ಜನಗಣತಿಗೆ ಬಿಜೆಪಿಯ ವಿರೋಧವಿಲ್ಲ ಎಂದು ಹೇಳಿದ್ದರು. ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡಾ ಜಾತಿಗಣತಿಗೆ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರಿಗೆ ಸಾಮಾಜಿಕ ಏಕತೆ, ಜಾತಿ ಆಧರಿತ ಗಣತಿ, ಸ್ವದೇಶಿ, ಕುಟುಂಬ ಮೌಲ್ಯಗಳು ಮತ್ತು ಭಾವನಾತ್ಮಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಗಾಡ್ಗೆ ಹೇಳಿದ್ದಾರೆ.
#WATCH | On caste census, RSS leader Shridhar Gadge in Nagpur says, "Inequality will increase means that if you count, then the census report will have to be displayed…What is its use? If its benefits are explained we can use it, we do not see any benefit in it, we see harm, it… pic.twitter.com/xjcVMaiq7T
— ANI (@ANI) December 19, 2023
ಅಮಿತ್ ಶಾ ಹೇಳಿಕೆಯನ್ನು ಪ್ರಸ್ತಾಪಿಸಿದ ಗಾಡ್ಗೆ, ರಾಜಕೀಯ ಪಕ್ಷಗಳು ತಮ್ಮದೇ ಆದ ನಿಲವು ಹೊಂದಿರಬಹುದು. ಆದರೆ ಆರೆಸ್ಸೆಸ್ ಜಾತಿ ಆಧರಿತ ಗಣತಿಯನ್ನು ಖಂಡತುಂಡವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
“ಆರೆಸ್ಸೆಸ್ ಸಾಮಾಜಿಕ ಸಮಾನತೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ನಮ್ಮ ದೇಶದಲ್ಲಿ ಜಾತಿ ಹೆಸರಿನಲ್ಲಿ ಒಡಕು ಮೂಡಿಸಲಾಗುತ್ತದೆ. ಸಮಾಜದಲ್ಲಿ ಜಾತಿ ಎನ್ನುವುದು ಅಸಮಾನತೆಯ ಮೂಲವಾದರೆ, ಜಾತಿಗಣತಿಯಂಥ ಕ್ರಮಗಳಿಂದ ಇದು ಮತ್ತಷ್ಟು ಉಲ್ಬಣಗೊಳ್ಳಲಿದೆ ಎನ್ನುವುದು ಆರೆಸ್ಸೆಸ್ನ ಸ್ಪಷ್ಟ ನಿಲುವು” ಎಂದರು.