Category: ನಗರ

  • Sanatana Dharma: ಇಂಡಿಯಾ (INDIA Alliance) ಯಾವ ಧರ್ಮದ ವಿರುದ್ಧವೂ ಇಲ್ಲ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

    Sanatana Dharma: ಇಂಡಿಯಾ (INDIA Alliance) ಯಾವ ಧರ್ಮದ ವಿರುದ್ಧವೂ ಇಲ್ಲ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

    ಕಲಬುರಗಿ/ಬೆಂಗಳೂರು:

    ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

    ಇಂಡಿಯಾ ಒಕ್ಕೂಟ ಸನಾತನ ಧರ್ಮದ ವಿರುದ್ಧವಿದೆ ಎಂದು ಬಿಜೆಪಿಯ ಹೇಳಿಕೆ ಬಗ್ಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಯಾವ ಧರ್ಮದ ವಿರುದ್ದ ಇಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ ಎಂದರು.

    ಮುಖ್ಯಮಂತ್ರಿ ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದರು. “ಧರ್ಮ ಎಂದರೆ ಬದುಕಿನ ದಾರಿ. ಜನರಿಗಾಗಿ ಧರ್ಮವಿರುವುದು, ಧರ್ಮಕ್ಕಾಗಿ ಜನ ಅಲ್ಲ ಎಂದರು. ಧರ್ಮ ಮನುಷ್ಯನ ಒಳಿತಿಗಾಗಿ ಇದೆ. ದಯೆಯೇ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಯಾವುದಯ್ಯಾ ಎಂದು ಬಸವಾದಿ ಶರಣರು ಹೇಳಿದ್ದಾರೆ. ಧರ್ಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇರಬೇಕು,” ಎಂದರು.

    ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ಇನ್ನೂ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿಯೇ ಇದೆ ಎಂದು ಪಾದಯಾತ್ರೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, 5 ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ ಎಂದು ಪ್ರಶ್ನಿಸಿದರು. ಯಾವ ಸರ್ಕಾರ 1.13 ಕೋಟಿ ಜನರಿಗೆ 2000 ರೂ.ಗಳನ್ನು ನೀಡಿದೆ? ಯಡಿಯೂರಪ್ಪ ಅವರು 10 ಕೆಜಿಯಲ್ಲಿ ಒಂದು ಕಳು ಕಡಿಮೆಯಾದರೂ ಪ್ರತಿಭಟಿಸುವುದಾಗಿ ಹೇಳಿದ್ದರು, ಮಾಡಿದರೇ ? ಎಂದರು. ಅವರ ಕಾಲದಲ್ಲಿ 7 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು. ಅಲ್ಲೇ ಗಿರಕಿ ಹೊಡೆಯುತ್ತಿದ್ದಾರೆ. ಐದು ಗ್ಯಾರಂಟಿ ಕೊಟ್ಟಿದ್ದೇವೆಂದು ಪಾದಯಾತ್ರೆ ಮಾಡುತ್ತಿದ್ದಾರೆಯೇ ಎಂದು ವ್ಯಂಗವಾಡಿದರು. 600 ಭಾರವಸೆ ನೀಡಿ ಶೇ 10 ರಷ್ಟನ್ನೂ ಜಾರಿಗೆ ತರಲಿಲ್ಲ. ಅವರಿಗೆ ಯಾವ ನೈತಿಕ ಹಕ್ಕಿದೆ ಎಂದರು.

    ಸಾಲಮನ್ನಾ ಮಾಡ್ತೀವಿ ಅಂದರು ಮಾಡಲಿಲ್ಲ. ನೀರಾವರಿಗೆ 1 ಲಕ್ಷ ಕೋಟಿ ನೀಡುವುದಾಗಿ ಹೇಳಿದರು. ನೀಡಲಿಲ್ಲ, ಯಾವುದನ್ನೂ ನೀಡಿಲ್ಲ ಎಂದರು.

    ಮೂರು ಡಿಸಿಎಂ: ಪಕ್ಷದ ವರಿಷ್ಠರ ತೀರ್ಮಾನ ಅಂತಿಮ

    ಮೂವರು ಡಿಸಿಎಂ ಮಾಡುವ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿರುವ ಬಗೆ ಪ್ರತಿಕ್ರಿಯೆ ನೀಡಿ, ಅಂತಿಮವಾಗಿ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು. ಈಗ ಒಬ್ಬರನ್ನು ಮಾಡಿದ್ದಾರೆ. ವರಿಷ್ಠರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ, ಮಾತನಾಡಲಿ. ಹೈ ಕಮಾಂಡ್ ನಿರ್ಧಾರವನ್ನು ಪಾಲಿಸುವುದಾಗಿ ಹೇಳಿದರು.

    ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಸರ್ವ ಪಕ್ಷ ನಿಯೋಗ

    ಕೃಷ್ಣ ಮೇಲ್ದಂಡೆ ಯೋಜನೆ ವಿಚಾರ ನ್ಯಾಯಾಲಯದಲ್ಲಿದ್ದು, ಆಂಧ್ರ , ತೆಲಂಗಾಣ ಅರ್ಜಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯೇ ಹೊರಡಿಸಿಲ್ಲ. ಮಹದಾಯಿ ಯೋಜನೆಯಲ್ಲಿ ಗೆಜೆಟ್ ಅಧಿಸೂಚನೆ ಆಗಿದೆ. ಆದರೆ ಅರಣ್ಯ ಹಾಗೂ ಪರಿಸರ ತೀರುವಳಿ ನೀಡಿಲ್ಲ. ನಾಳೆ ಕೊಟ್ಟರೆ, ನಾಡಿದ್ದೇ ಕೆಲಸ ಶುರು ಮಾಡುತ್ತೇವೆ ಎಂದರು. ಅದಕ್ಕಾಗಿಯೇ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗ ತೆರಳಲು ದಿನಾಂಕ ನಿಗದಿಯಾಗುತ್ತಿಲ್ಲ. ಬಿಜೆಪಿ
    ಯವರೇ 25 ಸಂಸದರಿದ್ದಾರೆ ಎಂದರು.

  • PM Vishwakarma Yojana in Bengaluru: ವಿಶ್ವಕರ್ಮ ಜನಾಂಗದವರು ಪ್ರೋತ್ಸಾಯಿಸಲು ಕೇಂದ್ರ ಸರ್ಕಾರದಿಂದ ರೂ. 13,000 ಕೋಟಿ ಧನಸಹಾಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    PM Vishwakarma Yojana in Bengaluru: ವಿಶ್ವಕರ್ಮ ಜನಾಂಗದವರು ಪ್ರೋತ್ಸಾಯಿಸಲು ಕೇಂದ್ರ ಸರ್ಕಾರದಿಂದ ರೂ. 13,000 ಕೋಟಿ ಧನಸಹಾಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    ಬೆಂಗಳೂರು:

    ದೇಶದಾದ್ಯಂತ ವಿಶ್ವಕರ್ಮರು ಮಾಡುವ ಸಾಂಪ್ರದಾಯಿಕ ಕೆಲಸಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುವುದು ಪ್ರಧಾನಿಯವರ ದೂರದೃಷ್ಟಿಯಾಗಿದ್ದು ವಿಶ್ವಕರ್ಮ ಜನಾಂಗದವರು ಯೋಜನೆಯ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೋರಿದರು.

    ಅವರು ಇಂದು ನಗರದ ನಿಮಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಯೋಜನೆಯು ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ಜನರನ್ನು ಬೆಂಬಲಿಸುವ ಮತ್ತು ಕೌಶಲ್ಯಗೊಳಿಸುವ ಪ್ರಧಾನ ಮಂತ್ರಿಯವರ ಆಶಯದಿಂದ ಸ್ಫೂರ್ತಿ ಪಡೆದಿದೆ, ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸರ್ಕಾರವು 13,000 ಕೋಟಿ ರೂಗಳ ಸಂಪೂರ್ಣ ಧನಸಹಾಯ ನೀಡಲಿದೆ ಎಂದರು.

    ಕುಶಲಕರ್ಮಿಗಳನ್ನು ಆರ್ಥಿಕವಾಗಿ ಬೆಂಬಲಿಸುವುದು ಮಾತ್ರವಲ್ಲದೆ ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯ, ಸಂಸ್ಕೃತಿ ಮತ್ತು ವೈವಿಧ್ಯಮಯ ಪರಂಪರೆಯನ್ನು ಜೀವಂತವಾಗಿರಿಸುವ ಹಾಗೂ ಪ್ರವರ್ಧಮಾನಕ್ಕೆ ತರುವ ಬಯಕೆಯೊಂದಿಗೆ ಈ ಉಪಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.

    ಪಿಎಂ ವಿಶ್ವಕರ್ಮ ಯೋಜನೆಯಡಿ, ಬಯೋಮೆಟ್ರಿಕ್ ಆಧಾರಿತ ಪಿಎಂ ವಿಶ್ವಕರ್ಮ ಪೋರ್ಟಲ್ ಬಳಸಿ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ವಿಶ್ವಕರ್ಮರು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅವರಿಗೆ ʻಪಿಎಂ ವಿಶ್ವಕರ್ಮ ಪ್ರಮಾಣಪತ್ರʼ ಮತ್ತು ಗುರುತಿನ ಚೀಟಿ ನೀಡಲಾಗುವುದು. ಜೊತೆಗೆ, ಮೂಲ ಮತ್ತು ಸುಧಾರಿತ ತರಬೇತಿಯನ್ನು ಒಳಗೊಂಡ ಕೌಶಲ್ಯ ಉನ್ನತೀಕರಣ, 15,000 ರೂ.ಗಳ ಟೂಲ್ಕಿಟ್ ಪ್ರೋತ್ಸಾಹಧನ, ಮೊದಲ ಕಂತಿನಲ್ಲಿ 1 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲ ಬೆಂಬಲ ಹಾಗೂ ಎರಡನೇ ಕಂತಿನಲ್ಲಿ 2 ಲಕ್ಷ ರೂ.ಗಳವರೆಗೆ 5% ರಿಯಾಯಿತಿ ಬಡ್ಡಿದರದಲ್ಲಿ ಸಾಲ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ನೀಡಲಾಗುವುದು ಎಂದರು.

    ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿ ಮಂಗಳೂರು ಮತ್ತು ಹುಬ್ಬಳ್ಳಿಯ ಇತರ ಎರಡು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ವಾಸ್ತವಿಕವಾಗಿ ಪ್ರಾರಂಭಿಸಲಾಗಿದೆ.

    ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ. ತೇಜಸ್ವಿ ಸೂರ್ಯ ಮತ್ತು ಶಾಸಕರಾದ ಶ್ರೀ.ಗೋಪಿನಾಥ ರೆಡ್ಡಿ, ಉದಯ ಗರುಡಚಾರ್ ಉಪಸ್ಥಿತರಿದ್ದರು.

  • Kalyana Karnataka: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ: ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ

    Kalyana Karnataka: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ: ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ

    ಕಲಬುರಗಿ:

    ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದ್ದು ನಕ್ಷೆ ಸಿದ್ದಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

    ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

    ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವಂತೆ ಸೂಚಿಸಲಾಗಿದೆ. ಶಿಕ್ಷಣಕ್ಕೆ ಒತ್ತು ನೀಡಬೇಕು. ಕೆ.ಕೆ ಆರ್.ಡಿ.ಬಿ ವ್ಯಾಪ್ತಿಯ ಯಾವ ಹುದ್ದೆಯೂ ಖಾಲಿ ಇರಬಾರದು. ಈಗಾಗಲೇ 2618 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಇನ್ನೂ ಹುದ್ದೆಗಳು ಖಾಲಿ ಇದ್ದರೆ ನೇಮಕಾತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

    ಸರ್ವಪಕ್ಷ ನಿಯೋಗಕ್ಕೆ ತಿಂಗಳಾದರೂ ಪ್ರಧಾನ ಮಂತ್ರಿಗಳು ಸಮಯ ಕೊಟ್ಟಿಲ್ಲ

    ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾಯಿಸಬೇಕೆಂದು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ತಿಂಗಳಾಗಿದೆ. ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಲು ಪತ್ರ ಬರೆದಿದ್ದು, ಈವರೆಗೆ ಒಂದು ತಿಂಗಳಾದರೂ ಪ್ರಧಾನ ಮಂತ್ರಿಗಳು ಸಮಯ ಕೊಟ್ಟಿಲ್ಲ. ಪುನಃ ಪತ್ರ ಬರೆಯುತ್ತಿದ್ದೇನೆ. ಜಂಟಿ ಸಮೀಕ್ಷೆ ಯ ನಂತರ ಎಷ್ಟು ಪರಿಹಾರ ನೀಡಬೇಕೆಂದು ತಿಳಿಯಲಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

    ಜನ-ಜಾನುವಾರು ಕಾಪಾಡಲು ಕೋಟಿ ರೂ.ಗಳ ತುರ್ತು ಯೋಜನೆ

    ಬೆಳೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದು ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ತೊಂದರೆ ಇಲ್ಲ. ಮುಂದೆ ತೊಂದರೆಯಾಗಬಹುದು ಎಂದು ತುರ್ತು ಯೋಜನೆ ತಯಾರು ಮಾಡಿದ್ದು, 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಂಟಿ ಸಮೀಕ್ಷೆ ಗಳನ್ನು ನಡೆಸಿದಾಗ 161 ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. 34 ತಾಲ್ಲೂಕುಗಳಲ್ಲಿ ಸಾಧಾರಣ ಬರಗಾಲ. ಒಟ್ಟು 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬೆಲೆ ಪರಿಹಾರ, ಕುಡಿಯುವ ನೀರು, ಜನ ಗುಳೆ ಹೋಗುವುದನ್ನು ತಡೆಯುತ್ತೇವೆ ಎಂದರು.

    ಇಂಜಿನಿಯರಿಂಗ್ ವಿಭಾಗ

    ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂ.ಗಳನ್ನು ಒದಗಿಸಿದ್ದು, ಇಂಜಿನಿಯರಿಂಗ್ ವಿಭಾಗ ಆಗಬೇಕೆಂಬ ಬೇಡಿಕೆಯಿದ್ದು, ಈ ಬಗ್ಗೆ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

    ಕಲಬುರಗಿಯಲ್ಲಿ371 ಜೆ ಕೋಶ ಸ್ಥಾಪನೆ ಮಾಡಲು ಪ್ರಾಮಾಣಿಕ ಪ್ರಯತ್ನ

    ಕಲ್ಯಾಣ ಕರ್ನಾಟಕ ಭಾಗದ ಮುಂಬಡ್ತಿ, ನೇಮಕಾತಿಗೆ ಸಂಬಂಧಿಸಿದಂತೆ 371 (ಜೆ) ಕೋಶ ಬೆಂಗಳೂರಿನಲ್ಲಿದೆ. ಕಲಬುರಗಿ ಯಲ್ಲಿ ಸ್ಥಾಪನೆಯಾಗಬೇಕೆಂದು ಹಿಂದಿನ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು ಆದರೆ ಪಾಲಿಸಲಿಲ್ಲ. ಆದರೆ ಅದನ್ನು ಜಾರಿ ಮಾಡಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.

    ಸಮಸ್ಯೆಗಳಿಗೆ ಪರಿಹಾರ ದೊರಕಬೇಕು
    ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸಚಿವ ಸಂಪುಟ ಸಭೆಯನ್ನೂ ನಡೆಸುತ್ತೇವೆ. ಆದರೆ ಸಭೆ ನಡೆಸುವುದಕ್ಕಿಂತ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕುವುದು ನಮ್ಮ ಆದ್ಯರೆಯಾಗಿದೆ ಎಂದರು.

    ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಪಾವತಿಯಾಗುತ್ತಿರುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಗ್ಯಾರಂಟಿ ಯೋಜನೆಗಳ ಪ್ರಭಾವ: ತೆಲಂಗಾಣ, ರಾಜಸ್ತಾನ ದಲ್ಲಿಯೂ ಘೋಷಣೆ

    ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ತೆಲಂಗಾಣ, ರಾಜಸ್ಥಾನ ರಾಜ್ಯಗಳಲ್ಲಿಯೂ ಗೃಹಲಕ್ಷ್ಮೀ ಯೋಜನೆಯಂಥ ಯೋಜನೆಗಳು ಘೋಷಣೆಯಾಗುತ್ತಿವೆ. ಜಾಗತಿಕ ಮೂಲ ಆದಾಯ ಎಂಬ ಪರಿಕಲ್ಪನೆ ಯನ್ನು ನಾವು ಅಳವಡಿಸಿಕೊಂಡು ಜನರಿಗೆ ದುಡ್ಡು ಕೊಡುತ್ತಿದ್ದೇವೆ. ಖರೀದಿಸುವ ಸಾಮರ್ಥ್ಯ ಹೆಚ್ಚಾದರೆ ಆರ್ಥಿಕ ಚಟುವಟಿಕೆಗಳು ಮತ್ತು ತಲಾದಾಯ ಹೆಚ್ಚಳವಾಗಿ, ಜಿಡಿಪಿ ಹೆಚ್ಚಾಗಲಿದೆ. ಇದರಿಂದ ರಾಜ್ಯ ಅಭಿವೃದ್ಧಿಯಾಗಲಿದೆ ಎಂದರು.

    ಕೆಕೆ ಆರ್.ಡಿಬಿ ಯಲ್ಲಿ ಅವ್ಯವಹಾರ: ಸೂಕ್ತ ಕ್ರಮ

    ಕೆ.ಕೆ.ಆರ್.ಡಿ.ಬಿ ಯಲ್ಲಿ ಅವ್ಯವಹಾರ ವಾಗಿರುವ ಬಗ್ಗೆ ಮಾತನಾಡಿ ತನಿಖೆ ಜಾರಿಯಲ್ಲಿದೆ, ಅಭಿವೃದ್ಧಿ ಆಯುಕ್ತರ ವರದಿ ಬರಬೇಕಿದೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

    26000 ಹುದ್ದೆಗಳ ಹಂತ ಹಂತವಾಗಿ ಭರ್ತಿ

    ಕಲ್ಯಾಣ ಕರ್ನಾಟಕದಲ್ಲಿ ಖಾಲಿಯಿರುವ 26000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಶಿಕ್ಷಕರು, ವೈದ್ಯರು, ಸುಮಾರು 40 ಸಾವಿರ ಜನರಿದ್ದಾರೆ. ನಮ್ಮ ಅವಧಿಯಲ್ಲಿಯೇ 70 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ವಿವರಿಸಿದರು.

    ಹೊಸದಾಗಿ 8 ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದು ಜನಪರ ನಿರ್ಣಯವಲ್ಲ

    ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ವಿಶ್ವವಿದ್ಯಾಲಯದ ಯೋಜನೆ ಕುರಿತು ಮಾತನಾಡಿ, ಹೊಸದಾಗಿ 8 ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದು ಜನಪರ ನಿರ್ಣಯವಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇರುವ ವಿವಿಗಳಿಗೆ ಮೂಲಸೌಕರ್ಯ ನೀಡಲು ಆಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

  • BS Yediyurappa: ಸಂಪೂರ್ಣ ಜನಹಿತ ಮರೆತ ಕಾಂಗ್ರೆಸ್ ಸರಕಾರ: ಬಿ.ಎಸ್.ಯಡಿಯೂರಪ್ಪ

    BS Yediyurappa: ಸಂಪೂರ್ಣ ಜನಹಿತ ಮರೆತ ಕಾಂಗ್ರೆಸ್ ಸರಕಾರ: ಬಿ.ಎಸ್.ಯಡಿಯೂರಪ್ಪ

    ಬೆಂಗಳೂರು:

    ಭೀಕರ ಬರಗಾಲ, ಕುಡಿಯುವ ನೀರಿನ ಹಾಹಾಕಾರ, ಕೆಆರ್‍ಎಸ್ ಸೇರಿ ಜಲಾಶಯಗಳು ಖಾಲಿ ಆಗಿದ್ದರೂ ಪಕ್ಕದ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಈ ಸರಕಾರ ಜನಹಿತವನ್ನು ಸಂಪೂರ್ಣ ಮರೆತಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟೀಕಿಸಿದರು.

    ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ಹಾಗೂ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಖಂಡಿಸಿ ರೈತ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸದ ಪ್ರಾರಂಭದ ಹಿನ್ನೆಲೆಯಲ್ಲಿ “ಕೋಲಾರದ ಮುಳುಬಾಗಿಲಿನ ಕುರುಡುಮಲೆ ಗಣಪತಿ ದೇವಸ್ಥಾನ”ದಲ್ಲಿ ಮಹಾಪೂಜೆಯ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

    ನಾನು ಮುಖ್ಯಮಂತ್ರಿಯಾಗಿದ್ದಾಗ ಬರಗಾಲವಿದ್ದರೂ ಏಕಾಂಗಿಯಾಗಿ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಮನೆ ಹಾನಿ ಸಂಬಂಧ 50 ಸಾವಿರದ ಬದಲಾಗಿ 5 ಲಕ್ಷ ಪರಿಹಾರ ಕೊಡಲಾಯಿತು. ಸಿದ್ದರಾಮಯ್ಯರ ಸರಕಾರದ ಯಾವೊಬ್ಬ ಸಚಿವರೂ ಬರಗಾಲದ ಕುರಿತು ತುಟಿ ಪಿಟಿಕ್ ಎನ್ನುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಬರಗಾಲದ ಮಾರ್ಗಸೂಚಿ ಬದಲಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆದು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಮಳೆ ಕೊರತೆ ಸಾಧ್ಯತೆ ಗಮನಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಇದರಿಂದ ರೈತರಿಗೆ ಮಳೆಯೂ ಇಲ್ಲದೆ, ಪಂಪ್ ಸೆಟ್‍ಗಳಿಗೆ ವಿದ್ಯುತ್ ಇಲ್ಲದಂತಾಗಿದೆ ಎಂದು ವಿವರಿಸಿದರು.

    ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಈಗಾಗಲೇ ಜನಮನ್ನಣೆಯನ್ನು ಕಳೆದುಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನು ಗೆಲ್ಲಲು ಶ್ರಮಿಸಲಾಗುವುದು ಎಂದು ತಿಳಿಸಿದರು.

    ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಆಶೀರ್ವಾದ ಪಡೆಯುವ ದೃಷ್ಟಿಯಿಂದ ಕುರುಡುಮಲೆ ದೇವಸ್ಥಾನಕ್ಕೆ ಬಂದಿದ್ದೇವೆ. ನರೇಂದ್ರ ಮೋದಿಜಿ ಅವರ ಆರೋಗ್ಯ ವೃದ್ಧಿ, ಅವರು ಮತ್ತೊಮ್ಮೆ ಭಾರತ ದೇಶದ ಪ್ರಧಾನಿಯಾಗಲಿ ಪ್ರಾರ್ಥನೆ ಮಾಡಿದ್ದಾಗಿ ಅವರು ವಿವರಿಸಿದರು.

    ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಜನಜಾಗೃತಿ ಮತ್ತು ಕಾಂಗ್ರೆಸ್ಸಿಗರನ್ನು ಸರಿದಾರಿಗೆ ತರುವ ಪ್ರಯತ್ನದ ಅಂಗವಾಗಿ ಈ ಪ್ರವಾಸ ನಡೆಯಲಿದೆ. ಬಿಜೆಪಿಯ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಕೈಬಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಜನವಿರೋಧಿ ಆಡಳಿತದ ವಿರುದ್ಧ ಜನಾಂದೋಲನಕ್ಕೆ ಬಿಜೆಪಿ ಮುಂದಾಗಿದೆ. ಸಂಸತ್ ಅಧಿವೇಶನ, ಗಣೇಶ, ಗೌರಿ ಹಬ್ಬದ ಬಳಿಕ ಎಲ್ಲ 224 ಕ್ಷೇತ್ರಗಳಿಗೂ ಬಿಜೆಪಿ ನಾಯಕರು ತೆರಳಿ ಸಿದ್ದರಾಮಯ್ಯ ಸರಕಾರದ ಜನವಿರೋಧಿ ನೀತಿಯನ್ನು ತಿಳಿಸಲಿದ್ದಾರೆ ಎಂದು ತಿಳಿಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಹಿರಿಯ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಸಂಸದ ಮುನಿಸ್ವಾಮಿ, ಸಚಿವರಾದ ಡಾ.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

  • ಕಲಬುರಗಿ ಜಿಲ್ಲಾ ಪೊಲೀಸರಿಗೆ ಸೈಬರ್ ಸೆಕ್ಯುರಿಟಿ ತರಬೇತಿ

    ಕಲಬುರಗಿ ಜಿಲ್ಲಾ ಪೊಲೀಸರಿಗೆ ಸೈಬರ್ ಸೆಕ್ಯುರಿಟಿ ತರಬೇತಿ

    CySecK ನಿಂದ ಸಮಗ್ರ ಸೈಬರ್ ಸುರಕ್ಷತೆ ತರಬೇತಿಯೊಂದಿಗೆ ಕಲಬುರಗಿ ಪೊಲೀಸ್ ಸಿಬ್ಬಂದಿಗಳ ಸಬಲೀಕರಣ

    ಕಲಬುರಗಿ:

    ರಾಜ್ಯದ ಸೈಬರ್ ಸುರಕ್ಷತೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, CySecK -ಕರ್ನಾಟಕ ರಾಜ್ಯದ ಸೈಬರ್ ಸೆಕ್ಯುರಿಟಿಯ ಕೆ-ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ – ವತಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಕಲಬುರಗಿಯ SP ಕಚೇರಿಯ ಪೊಲೀಸ್ ಭವನದಲ್ಲಿ ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 15, 2023 ರವರೆಗೆ ನಡೆದ ಐದು ದಿನಗಳ ಸಮಗ್ರ ತರಬೇತಿಯಲ್ಲಿ 220 ಪೊಲೀಸ್ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

    ಸೈಬರ್ ತಂತ್ರಜ್ಞಾನಗಳು ಮತ್ತು ಸೈಬರ್ ಅಪರಾಧ ತನಿಖೆಗಳಲ್ಲಿ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಪೊಲೀಸ್ ಸಿಬ್ಬಂದಿಗಳನ್ನು ಸಜ್ಜುಗೊಳಿಸುವುದು ಈ ತರಬೇತಿ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಇದಲ್ಲದೆ, ಸಾರ್ವಜನಿಕರಿಗೆ ಶಿಕ್ಷಣ ನೀಡುವಲ್ಲಿ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ, ಕಾನ್ಸ್‌ಟೇಬಲ್‌ಗಳಿಗೆ ಸೈಬರ್ ಅಪಾಯಗಳು ಮತ್ತು ನೈರ್ಮಲ್ಯ ಅಭ್ಯಾಸಗಳ ಕುರಿತು ಅಧಿವೇಶನವನ್ನು ನಡೆಸಲಾಯಿತು.

    ತರಬೇತಿ ಕಾರ್ಯಕ್ರಮದಲ್ಲಿ CySecK ಕೇಂದ್ರದ ಮುಖ್ಯಸ್ಥರಾದ ಶ್ರೀ ಕಾರ್ತಿಕ್ ರಾವ್ ಬಪ್ಪನಾಡ್, ಅವರು ಸೇರಿದಂತೆ , ಕಲಬುರಗಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪರಶುರಾಮ ವನಂಜಕರ, ಮತ್ತು CySecK ಕಾರ್ಯಕ್ರಮ ನಿರ್ವಾಹಕ ಶ್ರೀ. ಶಿವಲಿಂಗ ಸಾಲಕ್ಕಿ ಅವರು ಉಪಸ್ಥಿತರಿದ್ದರು.

  • ಬಿಡಿಎ ಆಯುಕ್ತರಿಂದ ಜೆ.ಪಿ. ನಗರ, ಅಂಜನಾಪುರ ಬಡಾವಣೆಗೆ ಹಠಾತ್ ಭೇಟಿ

    ಬಿಡಿಎ ಆಯುಕ್ತರಿಂದ ಜೆ.ಪಿ. ನಗರ, ಅಂಜನಾಪುರ ಬಡಾವಣೆಗೆ ಹಠಾತ್ ಭೇಟಿ

    ಬೆಂಗಳೂರು:

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಜಿ. ಕುಮಾರ ನಾಯಕ ಅವರು ಇಂದು ಜೆ.ಪಿ. ನಗರ 8ನೇ, 9ನೇ ಹಂತ, ಅಂಜನಾಪುರ ಟೌನ್ ಶಿಪ್, ಮುಂದುವರೆದ ಅಂಜನಾಪುರ ಬಡಾವಣೆ ಮತ್ತು ಆಲಹಳ್ಳಿ ಕೆರೆ ಹೊಂದಿಕೊಂಡಂತಿರುವ ಬಡಾವಣೆಗೆ ಹಠಾತ್ ಭೇಟಿ ನೀಡಿ ಪರಿವೀಕ್ಷಿಸಿದರು.

    ಜೆ.ಪಿ. ನಗರ 8, 9ನೇ ಹಂತ, ಅಂಜನಾಪುರ ಟೌನ್ ಶಿಪ್, ಮುಂದುವರೆದ ಅಂಜನಾಪುರ ಬಡಾವಣೆ ನಿರ್ಮಾಣ ಮಾಡಲು 1999 ರಿಂದ 2002ರಲ್ಲಿನ ಅಂತಿಮ ಅಧಿಸೂಚನೆಯಂತೆ 3058 ಎಕರೆ 27 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಸದರಿ ಜಮೀನಿನ ಪೈಕಿ 1071 ಎಕರೆ 23 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ವಿವಿಧ ಅಳತೆಯ 14881 ಮಧ್ಯಂತರ ನಿವೇಶನಗಳನ್ನು 2176 ಮೂಲೆ ನಿವೇಶನಗಳನ್ನು ಒಟ್ಟು 17057 ನಿವೇಶನಗಳನ್ನು ರಚಿಸಿ, 39 ಸಿ.ಎ. ನಿವೇಶನಗಳು, 37 ಉದ್ಯಾನವನಗಳು ಪ್ರಾಧಿಕಾರದಿಂದ ನಿರ್ಮಿಸಲಾಗಿದೆ.

    ಜೆ.ಪಿ. ನಗರ 9ನೇ ಹಂತ, 7ನೇ ಬ್ಲಾಕ್ ವ್ಯಾಪ್ತಿಗೆ ಒಳಪಡುವ ಆಲಹಳ್ಳಿ ಕೆರೆಯ ಹಿಂಭಾಗದಲ್ಲಿ ಅನುಮೋದಿತ ನಕ್ಷೆಯಂತೆ ಬಡಾವಣೆ ನಿರ್ಮಾಣ ಮಾಡಿ ವಿವಿಧ ಅಳತೆಯ 71 ನಿವೇಶನಗಳನ್ನು ರಚಿಸಲಾಗಿರುತ್ತದೆ.

    ಈ ನಿವೇಶನವು ರಸ್ತೆ ಮಟ್ಟದಿಂದ ಸುಮಾರು 5 ಅಡಿಗಳಷ್ಟು ಆಳದಲ್ಲಿರುವುದರಿಂದ ಮಳೆ ಬಂದಾಗ ಸಂಪೂರ್ಣ ಜಲಾವೃತವಾಗುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಆಯುಕ್ತರು ಸದರಿ ಪ್ರದೇಶವನ್ನು ಎತ್ತರಿಸಿ, ಮಳೆ ಬಂದಾಗ ಜಲಾವೃತವಾಗುವುದನ್ನು ಸರಿಪಡಿಸುವಂತೆ ಅಭಿಯಂತರ ಸದಸ್ಯರಿಗೆ ಸೂಚಿಸಿದರು.

    WhatsApp Image 2023 09 16 at 8.33.06 PM
    WhatsApp Image 2023 09 16 at 8.33.08 PM

    ಸದರಿ ಬಡಾವಣೆಗಳಲ್ಲಿ ಸುಮಾರು 95.56 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿರುವ ಬಡಾವಣೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  • Bengaluru: ಬೆಂಗಳೂರಿನಲ್ಲಿ 7.83 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ: ವಿದೇಶಿಗರು ಸೇರಿ 14 ಡ್ರಗ್ ಪೆಡ್ಲರ್‌ಗಳ ಬಂಧನ

    Bengaluru: ಬೆಂಗಳೂರಿನಲ್ಲಿ 7.83 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ: ವಿದೇಶಿಗರು ಸೇರಿ 14 ಡ್ರಗ್ ಪೆಡ್ಲರ್‌ಗಳ ಬಂಧನ

    ಬೆಂಗಳೂರು:

    ವಿದೇಶಿ ಪ್ರಜೆಗಳು ಮತ್ತು ಇತರ ರಾಜ್ಯದವರು ಸೇರಿದಂತೆ 14 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, 7.83 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ತಿಳಿಸಿದೆ.

    ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ ಮತ್ತು ಕಾಡುಗೋಡಿಯಲ್ಲಿ ಕಳೆದ ಒಂದು ವಾರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದವು.

    ಈ ಪ್ರಕರಣಗಳಲ್ಲಿ ಒಟ್ಟು 14 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ಇದರಲ್ಲಿ ಮೂವರು ವಿದೇಶಿ ಪ್ರಜೆಗಳು, ಒರಿಸ್ಸಾ ಮತ್ತು ಕೇರಳದ ತಲಾ ನಾಲ್ವರು ಮತ್ತು ಬೆಂಗಳೂರಿನ ಮೂವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    WhatsApp Image 2023 09 16 at 8.04.56 PM

    ಇವರಿಂದ ಅಂದಾಜು 7,83,70,000 ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 182 ಕೆಜಿ ಗಾಂಜಾ, 1.450 ಕೆಜಿ ಹ್ಯಾಶಿಶ್ ಆಯಿಲ್, 16.2 ಗ್ರಾಂ ಎಂಡಿಎಂಎ, 135 ಎಕ್ಸ್‌ಟಸಿ ಮಾತ್ರೆಗಳು, 1 ಕೆಜಿ ಮೆಫೆಡ್ರಾನ್ ವೈಟ್ ಪೌಡರ್, 1 ಕೆಜಿ ಮೆಫೆಡ್ರಾನ್ ವೈಟ್ ಪೌಡರ್, 880 ಗ್ರಾಂ ಕೊಕೇನ್, 230 ಗ್ರಾಂ ಎಂಡಿಎಂಎ ಎಕ್ಸ್ಟಸಿ ಪೌಡರ್ ವಶಪಡಿಸಿಕೊಳ್ಳಲಾಗಿದೆ.

    ಅಲ್ಲದೆ, ಎಂಟು ಮೊಬೈಲ್ ಫೋನ್‌ಗಳು, ಎರಡು ಕಾರುಗಳು, ಒಂದು ಸ್ಕೂಟರ್ ಮತ್ತು ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

  • BBMP: ರಾಜಕಾಲುವೆ ಒತ್ತುವರಿ ಮಾಡಿರುವುದು ಸಾರ್ವಜನಿಕರು ಗಮನಕ್ಕೆ ಬಂದಿದ್ದರೆ ತಕ್ಷಣ ಫೋಟೋ ಸಮೇತ ದೂರು ನೀಡಿ

    BBMP: ರಾಜಕಾಲುವೆ ಒತ್ತುವರಿ ಮಾಡಿರುವುದು ಸಾರ್ವಜನಿಕರು ಗಮನಕ್ಕೆ ಬಂದಿದ್ದರೆ ತಕ್ಷಣ ಫೋಟೋ ಸಮೇತ ದೂರು ನೀಡಿ

    ಬೆಂಗಳೂರು:

    ರಾಜಕಾಲುವೆಗಳ ಮೇಲೆ ಯಾವುದಾದರೂ ಒತ್ತುವರಿಗಳು ಸಾರ್ವಜನಿಕರು ಗಮನಕ್ಕೆ ಬಂದಿದ್ದರೆ ಅಂತಹ ಒತ್ತುವರಿಗಳ ಮಾಹಿತಿಯನ್ನು ಭಾವಚಿತ್ರದೊಂದಿಗೆ ಈ ತಿಂಗಳ 20ರೊಳಗೆ ಕಳುಹಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೋರಿದೆ.

    ಘನ ಉಚ್ಛ ನ್ಯಾಯಾಲಯವು WP No. 38401/2014 ದಾವೆಯಲ್ಲಿ ರಾಜಕಾಲುವೆಗಳ ಮೇಲೆ ಹೊಸದಾಗಿ ಒತ್ತುವರಿಗಳು ಇದ್ದಲ್ಲಿ ಅಂತಹ ಒತ್ತುವರಿಗಳನ್ನು ತುರ್ತಾಗಿ ಗುರುತಿಸಿ, ಸದರಿ ಒತ್ತುವರಿಗಳನ್ನು ತೆರವುಗೊಳಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತದೆ.

    ಅದರಂತೆ ಕ್ರಮ ಕೈಗೊಳ್ಳಬೇಕಾಗಿದ್ದು, ಇದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು, ಘನ ಸರ್ಕಾರದ ಆದೇಶ ಸಂಖ್ಯೆ: ನಅಇ 250 ಎಂಎನ್‌ವೈ 2018(ಭಾಗ-3), ಬೆಂಗಳೂರು ದಿನಾಂಕ:28.08.2023(1) ರಂತೆ ರಾಜಕಾಲುವೆಗಳ ಮೇಲೆ ಇರುವ ಒತ್ತುವರಿಗಳನ್ನು ಗುರುತಿಸಲು ಬಿಬಿಎಂಪಿ ವತಿಯಿಂದ ಕ್ರಮಕೈಗೊಳ್ಳಲಾಗುತ್ತಿರುತ್ತದೆ.

    ಮುಂದುವರಿದು, ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಾಜಕಾಲುವೆಗಳಲ್ಲಿ ಒತ್ತುವರಿಗಳನ್ನು/ಅತಿಕ್ರಮಣಗಳನ್ನು ಗುರುತಿಸಲು ಸಾರ್ವಜನಿಕರು ಕೈಜೋಡಿಸಿದಲ್ಲಿ ಹೆಚ್ಚಿನ ಒತ್ತುವರಿಗಳನ್ನು ಗುರುತಿಸುವಲ್ಲಿ ಪಾಲಿಕೆಗೆ ಸಹಕಾರಿಯಾಗುತ್ತದೆ.

    WhatsApp Image 2023 09 16 at 7.57.10 PM
    WhatsApp Image 2023 09 16 at 8.02.42 PM

    ಸದರಿ ಒತ್ತುವರಿಗಳನ್ನು ತೆರವುಗೊಳಿಸಿಕೊಂಡು ರಾಜಕಾಲುವೆಗಳನ್ನು ನಿರ್ಮಾಣ ಮಾಡುವುದರಿಂದ ಮಳೆನೀರು ಸರಾಗವಾಗಿ ಹರಿದು ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾನಿಯನ್ನು ತಡೆಗಟ್ಟಬಹುದಾಗಿರುತ್ತದೆ. ಆದುದರಿಂದ ಸ್ಥಳೀಯ/ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ರಾಜಕಾಲುವೆಗಳ ಮೇಲೆ ಯಾವುದಾದರೂ ಒತ್ತುವರಿಗಳು ತಮ್ಮ ಗಮನಕ್ಕೆ ಬಂದಿದ್ದರೆ ಅಂತಹ ಒತ್ತುವರಿಗಳ ಮಾಹಿತಿಯನ್ನು ಭಾವಚಿತ್ರದೊಂದಿಗೆ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರು, ಬೃಹತ್ ನೀರುಗಾಲುವೆ ರವರಿಗೆ ದಿನಾಂಕ: 20-09-2023ರ ಅಪರಾಹ್ನ 2.00 ಗಂಟೆಯ ಒಳಗಾಗಿ ಸಲ್ಲಿಸಲು ಇಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ರವರು ಕೋರಿರುತ್ತಾರೆ.

  • Cauvery Water to Tamil Nadu: ಧಮ್ಮು, ತಾಕತ್ತು ಇದ್ದರೆ, ನೀರು ಬಿಡದೇ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಲಿ: ಬಸವರಾಜ ಬೊಮ್ಮಾಯಿ

    Cauvery Water to Tamil Nadu: ಧಮ್ಮು, ತಾಕತ್ತು ಇದ್ದರೆ, ನೀರು ಬಿಡದೇ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಲಿ: ಬಸವರಾಜ ಬೊಮ್ಮಾಯಿ

    ಬೆಂಗಳೂರು:

    ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತು ಬದಲಾಯಿಸುತ್ತಿದ್ದು, ಇದೊಂದು ಊಸರವಳ್ಳಿ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ‌.

    ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ತಮಿಳುನಾಡಿನ ಪ್ರಭಾವ ವಿಪರೀತ ಇದ್ದ ಹಾಗೆ ಇದೆ. ಸುಪ್ರೀಂ ಕೊರ್ಟ್ ಆದೇಶ ಆಗಿಲ್ಲ. ಸಿಡಬ್ಲುಎಂಎ ಸಭೆ ಆಗಿಲ್ಲ ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಮಾಡಿ ರಾಜ್ಯದ ಜನತೆಗೆ ಧೋಖಾ ಮಾಡಿದೆ. ಇದರ ವಿರುದ್ದ ನಮ್ಮ ಪಕ್ಷದ ವತಿಯಿಂದ ತಿವ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

    ಆರಂಭದಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರು ಹೇಳಿದ ಮಾರನೇ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ನೀರು ಬಿಡುತ್ತಾರೆ. ಸರ್ಕಾರ ನೀರು ಬಿಡಲು ತೀರ್ಮಾನ ಮಾಡುವುದಾದರೆ ಸರ್ವ ಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು. ಸಿಎಂ ಸರ್ವ ಪಕ್ಷ ದ ಸಭೆ ಕರೆದು ನೀರು ಬಿಡುವುದಿಲ್ಲ ಅಂತ ಹೇಳುತ್ತಾರೆ. ಡಿಸಿಎಂ ನೀರು ಬಿಡುತ್ತಾರೆ. ಇದು ಊಸರವೊಳ್ಳಿ ಸರ್ಕಾರ. ಈ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಬಿಡುತ್ತಿರುವುದು ಕರಾಳ ನಿರ್ಣಯ ಎಂದು ವಾಗ್ದಾಳಿ ನಡೆಸಿದರು.

    ಧಮ್ ಇದ್ರೆ ನೀರು ಬಿಡದೇ ವಾದ ಮಾಡಲಿ

    ಬಿಜೆಪಿಯವರಿಗೆ ಪ್ರಧಾನಿ ಭೇಟಿ ಮಾಡಿ ಮಾತನಾಡುವ ಧಮ್ ಇಲ್ಲ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರಕ್ಕೆ ನಿಜವಾದ ತಾಕತ್ತು ದಮ್ಮು ಇದ್ದರೆ ನೀರು ಬಿಡುತ್ತಿರಲಿಲ್ಲ. ನೀರು ಬಿಟ್ಟು ತಾಕತ್ತು ದಮ್ಮಿನ ಬಗ್ಗೆ ಮಾತನಾಡುತ್ತಾರೆ‌. ನಿಮಗೆ ತಾಕತ್ತು ದಮ್ ಇದ್ದರೆ ತಮಿಳುನಾಡಿಗೆ ನೀರು ಬಿಡದೇ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿ ರಾಜ್ಯದ ಹಿತ ಕಾಪಾಡಿ ಎಂದು ಆಗ್ರಹಿಸಿದರು.

    ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ರಾಜ್ಯದ ಎಂಪಿಗಳು ಪ್ರಧಾನಿಯನ್ನು ಭೇಟಿ ಮಾಡಿದರೂ ಏನೂ ಪ್ರಯೋಜನ ಇಲ್ಲ. ಇವರಿಗೆ ಓಟ್ ಹಾಕಿದ ಕಾವೇರಿ ಕೊಳ್ಳದ ಮಕ್ಕಳು ಪಶ್ಚಾತಾಪ ಪಡುತ್ತಿದ್ದಾರೆ‌. ಸುಪ್ರೀಂ ಕೋರ್ಟ್ ಮತ್ತು ತಮಿಳುನಾಡಿನ ಸಿಎಂ ಜೊತೆ ಮಾತುಕತೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

  • Shimoga: ಬಗರಹುಕುಂ ಕಾನೂನು ಕಾಗೋಡು ತಿಮ್ಮಪ್ಪರವರು ಮಾಡಿದ ಪುಣ್ಯದ ಕೆಲಸ

    Shimoga: ಬಗರಹುಕುಂ ಕಾನೂನು ಕಾಗೋಡು ತಿಮ್ಮಪ್ಪರವರು ಮಾಡಿದ ಪುಣ್ಯದ ಕೆಲಸ

    ಕಾಗೋಡು ತಿಮ್ಮಪ್ಪರಿಂದಲೇ ನಾನು ಹೋರಾಟ ಕಲಿತಿದ್ದೇನೆ: ಸಚಿವ ಮಧು ಬಂಗಾರಪ್ಪ

    ಶಿವಮೊಗ್ಗ:

    ಕಾಗೋಡು ತಿಮ್ಮಪ್ಪ ಅವರು ಶರಾವತಿ ನೀರಿಗಾಗಿ ಹೋರಾಟ ಆರಂಭಿಸಿದ್ದರು. ಆ ಸಮಯದಲ್ಲಿ ನಮ್ಮ ತಂದೆಯವರಿಗೆ ಅನಾರೋಗ್ಯದ ಸಮಸ್ಯೆ ಇದ್ದುದರಿಂದ ನನ್ನನ್ನು ನಮ್ಮ ತಂದೆ ಹೋರಾಟಕ್ಕೆ ಹೋಗು ಎಂದಿದ್ದರು. ಅವತ್ತು ಆ ಹೋರಾಟದಲ್ಲಿ ಪಾಲ್ಗೊಂಡು ಕಾಗೋಡು ತಿಮ್ಮಪ್ಪ ಅವರಿಂದಲೇ ನಾನು ಹೋರಾಟ ಕಲಿತ್ತಿದ್ದೇನೆ. ಅವರು ಮಾಡಿರುವ ಬಗರಹುಕಂ ಪುಣ್ಯದ ಕೆಲಸ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.

    ಇಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

    2012 ರಲ್ಲಿ ನಾವು ಜೆಡಿಎಸ್ ನಲ್ಲಿದ್ದೇವು.‌ ನೀರಿಗಾಗಿ ಅವತ್ತು ಪಾದಯಾತ್ರೆ ಘೋಷಣೆ ಮಾಡಿದ್ದೆ. ಕಾಗೋಡು ತಿಮ್ಮಪ್ಪ ಅವರು ಹೋರಾಟ ಮಾಡುತ್ತಿದ್ದರು. ಅವರೇ ನನಗೆ ಹೋರಾಟದ ಬಗ್ಗೆ ‌ಹೇಳಿ ಕೊಟ್ಟಿದ್ದಾರೆ. ‌ನಮ್ಮ ತಂದೆಯವರು ಮುಖ್ಯಮಂತ್ರಿ ಇದ್ದರೂ ಕೂಡ ನಮಗೆ ಹೋರಾಟದ ಬಗ್ಗೆ ಎಲ್ಲ ಗೊತ್ತಿರಲಿಲ್ಲ. ಕಾಗೋಡು ತಿಮ್ಮಪ್ಪ ಅವರಿಂದ ಎಲ್ಲರೂ ಬೈಸಿಕೊಂಡಿದ್ದರು. ನಾನು ಮಾತ್ರ ಅವರಿಂದ ಯಾವತ್ತು ಬೈಸಿಕೊಂಡಿಲ್ಲ. ವಿರೋಧ ಪಕ್ಷ ಮತ್ತು ನಮ್ಮದೇ ಪಕ್ಷಲ್ಲಿದ್ದಾಗಲೂ ಆ ರೀತಿಯ ಘಟನೆ ನಡೆದಿಲ್ಲ. ಆಗ ನಮ್ಮ ಪಾದಯಾತ್ರೆ ರಾಜಕೀಯ ಪ್ರೇರಿತ ಇರಬಹುದು. ಅವರು ಪಾದಯಾತ್ರೆ ಮಾಡಲಿ ಎಂದಿದ್ದರು. ಆ ಘಟನೆ ಇಂದಿಗೂ ನನಗೆ ನೆನಪಿದೆ ಎಂದರು.

    ಶರಾವತಿಯಿಂದ ಸಾಗರಕ್ಕೆ ನೀರು ತರುವ ಯೋಜನೆ ಕಾಗೋಡು ತಿಮ್ಮಪ್ಪರಿಂದ ಯಶಸ್ವಿಯಾಗಿದೆ. ಬಗರಹುಕುಂ ಕಾನೂನು ತರುವಲ್ಲಿ ಕಾಗೋಡು ತಿಮ್ಮಪ್ಪ ಅವರ ಪಾತ್ರ ಮಹತ್ವದ್ದಿದೆ. ನಮ್ಮ ತಂದೆ ಬಂಗಾರಪ್ಪ ಮತ್ತು ಕಾಗೋಡು ತಿಪ್ಪಮ್ಮ ಅವರು ಹಗಲು ರಾತ್ರಿಯನ್ನದೇ ಹೋರಾಟ ಮಾಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಗರಹುಕಂ ಕಾನೂನು ಸಮಿತಿಯ ಅಧ್ಯಕ್ಷರಾಗಿದ್ದ ಅವರಿಗೆ ನಾನು ವಿರೋಧ ಪಕ್ಷದಲ್ಲಿದ್ದುಕೊಂಡು ಸೊರಬ ತಾಲ್ಲೂಕಿಗೂ ಹಕ್ಕು ಪತ್ರ ವಿತರಣೆಗೆ ಮನವಿ ಮಾಡಿದ್ದೆ. 1900 ಜನರಿಗೆ ಅವತ್ತು ಹಕ್ಕು ಪತ್ರ ವಿತರಣೆ ಮಾಡಲಾಯಿತು. ಕಾಗೋಡು ತಿಮ್ಮಪ್ಪ ಅವರು ನನಗೆ ಒಂದು ಮಾತು ಹೇಳಿದ್ದರು. ‌ಸೊರಬದ ಮಣ್ಣಿನ ನೆಲ ನಿನಗೆ ಬಲ ಕೊಟ್ಟಿದೆ. ಅದನ್ನು ಮುಂದುವರೆಸಿಕೊಂಡು ಹೋಗು ಎಂದಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಇಂದಿಗೂ ನಾನು ಶಾಸಕನಾಗಿರಲಿ, ಸಚಿವನಾಗಿದ್ದರೂ ವಾರದಲ್ಲಿ ಮೂರು ಬಾರಿ ಕರೆ ಮಾಡಿರುತ್ತಾರೆ. ನಾನು ಅವರಲ್ಲಿ ಹಲವಾರು ಸಲಹೆಗಳನ್ನು ಪಡೆದಿದ್ದೇನೆ ಎಂದರು.

    ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದು, ಅವರ ಪರವಾನಗಿ ಪಡೆದು ಈ ಭಾಗದ ಜನರಿಗೆ ಹಕ್ಕುಪತ್ರ ವಿತರಿಸುವ ಕೆಲಸ ಮಾಡಿದ್ದಾರೆ.‌ ಆರು ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಕಾಗೋಡು ತಿಮ್ಮಪ್ಪ ಅವರ ಭೂಹಕ್ಕಿನ ಕನಸನ್ನು ನನಸು ಮಾಡಬೇಕಿದೆ. ಅದನ್ನು ಮಾಡಿದರೆ ಮಾತ್ರ ನಾವು ಅವರಿಗೆ ಅಭಿನಂದನೆ ಸಲ್ಲಿಸಿದ ಹಾಗೇ ಆಗುತ್ತದೆ. ಭೂಹಕ್ಕು ಕೊಡುವುದು ದೇವರ ಕೆಲಸ. ಪುಣ್ಯದ ಕೆಲಸ. ಅದನ್ನು ನಾವು ಎಲ್ಲರೂ ಸೇರಿ ಮಾಡೋಣ.‌ ನಿಮ್ಮ ಸಹಕಾರ ನನಗೆ ಬೇಕು ಎಂದರು.

    ನಾನು ಈಗಾಗಲೇ ಆರರಿಂದ ಎಂಟು ಸಭೆ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೂ ನಾವು ಮನವಿ ಮಾಡಬೇಕಾಗುತ್ತದೆ. ಕಾನೂನುಬದ್ಧವಾಗಿ ಪ್ರಾಮಾಣಿಕವಾದ ಹೋರಾಟ ನಾನು ಮಾಡುತ್ತೇನೆ. ವಿರೋಧ ಪಕ್ಷದ ಸಹಕಾರವೂ ಬಹಳ ಬೇಕಾಗುತ್ತದೆ. ಎಲ್ಲರ ಸಹಕಾರದಿಂದ ಕೆಲಸ ಮಾಡುತ್ತೇನೆ. ದಿ.ದೇವರಾಜು ಅರಸು ಪ್ರಶಸ್ತಿಯನ್ನು ಕಾಗೋಡು ತಿಮ್ಮಪ್ಪ ಅವರು ಪಡೆದಿದ್ದಾರೆ. ಅವರಂತೆಯೇ ನಾವು ಬದುಕುತ್ತೇನೆ ಎಂದರು.

    ಸಮಾರಂಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಮಾಜಿ ಸಭಾಪತಿಗಳಾದ ಬಿ‌ ಎಲ್ ಶಂಕರ್, ಡಿ‌ ಹೆಚ್ ಶಂಕರ್ ಮೂರ್ತಿ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಕೆ ಎಸ್ ಈಶ್ವರಪ್ಪ, ಶಾಸಕ ಚನ್ನಬಸಪ್ಪ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಮತ್ತಿತರರ ಉಪಸ್ಥಿತರಿದ್ದರು.