ಬೆಂಗಳೂರು, ಡಿ.18: ಬೆಂಗಳೂರು ನಗರಕ್ಕೆ ನೀರು ಪೂರೈಸುವ ಪ್ರಮುಖ ಯೋಜನೆಯಾದ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯಲ್ಲಿ ಉಂಟಾಗಿದ್ದ ತುರ್ತು ಲೀಕೆಜ್ ಸಮಸ್ಯೆಯನ್ನು ಬೆಂಗಳೂರು ಜಲಮಂಡಳಿ (BWSSB) ತಾಂತ್ರಿಕ ತಂಡಗಳು 18 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ದುರಸ್ತಿ ಮಾಡಿವೆ.
ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅವರು ಮಾಹಿತಿ ನೀಡಿದ್ದು, 3000 ಮಿಮೀ ವ್ಯಾಸದ ಟ್ರಾನ್ಸ್ಮಿಷನ್ ಮೇನ್ ಪೈಪ್ನ ಸ್ಕೌರ್ ವಾಲ್ವ್ ಬಳಿ ಲೀಕೆಜ್ ಪತ್ತೆಯಾಗಿ, ಅದನ್ನು ಯುದ್ಧಮಟ್ಟದಲ್ಲಿ ದುರಸ್ತಿಗೊಳಿಸಲಾಗಿದೆ ಎಂದರು.
ತಾಂತ್ರಿಕ ವಿವರಗಳು
ಲೀಕೆಜ್ ಸಮಸ್ಯೆ ಟಿ.ಕೆ. ಹಳ್ಳಿ (ಗುಂಡಾಪುರ) ಯಿಂದ 5.2 ಕಿ.ಮೀ ದೂರದ ಚೇನೇಜ್ ಪ್ರದೇಶದಲ್ಲಿ ಕಂಡುಬಂದಿದ್ದು, ದುರಸ್ತಿ ಕಾರ್ಯದ ವೇಳೆ ಹಾನಿಗೊಂಡ ಗ್ಯಾಸ್ಕೆಟ್ಗಳ ಬದಲಾವಣೆ ಹಾಗೂ ಮುರಿದ ನಟ್–ಬೋಲ್ಟ್ಗಳನ್ನು ಹೊಸದಾಗಿ ಅಳವಡಿಸುವ ಸಂಕೀರ್ಣ ಕಾರ್ಯ ನಡೆಸಲಾಗಿದೆ.
ಈ ತುರ್ತು ದುರಸ್ತಿಗಾಗಿ ಡಿ.17 ರಂದು ಬೆಳಗ್ಗೆ 7:30 ರಿಂದ ಡಿ.18 ರಂದು ರಾತ್ರಿ 2:00 ಗಂಟೆಯವರೆಗೆ 18 ಗಂಟೆಗಳ ಶಟ್ಡೌನ್ ಕೈಗೊಳ್ಳಲಾಗಿತ್ತು.
ಡ್ಯುಯಲ್ ರಿಪೇರಿ ಯಶಸ್ಸು
ಶಟ್ಡೌನ್ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡು, 5ನೇ ಹಂತದ ಪಂಪ್ಹೌಸ್ ಒಳಗಿನ 900 ಮಿಮೀ ಬಟರ್ಫ್ಲೈ ವಾಲ್ವ್ನ ಬೈಪಾಸ್ ವ್ಯವಸ್ಥೆಯಲ್ಲಿದ್ದ ಲೀಕೆಜ್ ಸಮಸ್ಯೆಯನ್ನೂ ಒಂದೇ ವೇಳೆ ದುರಸ್ತಿಗೊಳಿಸಲಾಗಿದೆ.
ನೀರು ಪೂರೈಕೆ ಪುನರಾರಂಭ
“ದುರಸ್ತಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಸ್ತುತ ಮೂರು ಪಂಪುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ನಗರಕ್ಕೆ ನೀರು ಪಂಪಿಂಗ್ ಪುನರಾರಂಭವಾಗಿದೆ. ತುರ್ತು ನಿರ್ವಹಣಾ ಅವಧಿಯಲ್ಲಿ ಸಹಕಾರ ನೀಡಿದ ಸಾರ್ವಜನಿಕರಿಗೆ ಧನ್ಯವಾದಗಳು” ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
