ಮೂರು ವರ್ಷಗಳಲ್ಲಿ ವಾರ್ಷಿಕ ಆನ್ಲೈನ್ ಮಾರಾಟ ₹5 ಕೋಟಿಗೆ ಹೆಚ್ಚಿಸಲು ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ಗುರಿ; ಗಣೇಶ ಹಬ್ಬಕ್ಕೆ ಹೊಸ ಇ-ಕಾಮರ್ಸ್ ಪೋರ್ಟಲ್
ಬೆಂಗಳೂರು, ಸೆಪ್ಟೆಂಬರ್ 2: ಕರ್ನಾಟಕದ ಕರಕುಶಲ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ವಿಶಾಲ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (KSHDCL) ಕಾವೇರಿ ಹ್ಯಾಂಡಿಕ್ರಾಫ್ಟ್ಸ್ಗೆ ಡಿಜಿಟಲ್ ರೂಪ ನೀಡುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಇ-ಕಾಮರ್ಸ್ ಪೋರ್ಟಲ್ ಅನ್ನು ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲು ಯೋಜಿಸಿದೆ.
ಹೊಸ ಡಿಜಿಟಲ್ ವೇದಿಕೆಯ ಮೂಲಕ ಕಾವೇರಿ ಹ್ಯಾಂಡಿಕ್ರಾಫ್ಟ್ಸ್ನ ವಾರ್ಷಿಕ ಆನ್ಲೈನ್ ಮಾರಾಟವನ್ನು ಪ್ರಸ್ತುತ ₹70 ಲಕ್ಷದಿಂದ ಮುಂದಿನ ಮೂರು ವರ್ಷಗಳಲ್ಲಿ ₹5 ಕೋಟಿಗೆ ಹೆಚ್ಚಿಸುವ ಗುರಿಯನ್ನು KSHDCL ಹೊಂದಿದೆ.
ಹಾಲಿ ಇ-ಕಾಮರ್ಸ್ ಪೋರ್ಟಲ್ ಅನ್ನು 2012ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಪ್ರಸ್ತಾವಿತ ಹೊಸ ವೇದಿಕೆಯು ಹಾಲಿ ವೆಬ್ಸೈಟ್ನ ವಿನ್ಯಾಸ ಬದಲಾವಣೆಗೆ ಮಾತ್ರ ಸೀಮಿತವಾಗದೆ, ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹೆಚ್ಚು ಗ್ರಾಹಕಸ್ನೇಹಿ ಮತ್ತು ವಿಸ್ತೃತ ಡಿಜಿಟಲ್ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ.
ಹೊಸ ಪೋರ್ಟಲ್ನ ಪ್ರಮುಖ ವೈಶಿಷ್ಟ್ಯಗಳಲ್ಲಿ ‘Customize Product’ ಸೌಲಭ್ಯವೂ ಒಂದಾಗಿದೆ. ಇದರ ಮೂಲಕ ಗ್ರಾಹಕರು ತಮ್ಮ ಆಯ್ಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಉತ್ಪನ್ನದ ಗಾತ್ರ, ವಿನ್ಯಾಸ, ಬಣ್ಣ, ವಸ್ತು, ಕೆತ್ತನೆ, ವೈಯಕ್ತೀಕರಣ, ಪ್ರಮಾಣ ಮತ್ತು ಪ್ಯಾಕೇಜಿಂಗ್ ಕುರಿತ ಬೇಡಿಕೆಗಳನ್ನು ಸಲ್ಲಿಸಬಹುದು.
ಕಾರ್ಪೊರೇಟ್ ಗಿಫ್ಟಿಂಗ್ ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಅಗತ್ಯವಿರುವ ಉತ್ಪನ್ನಗಳಿಗೂ ಈ ಕಸ್ಟಮೈಸೇಷನ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಸ ಪೋರ್ಟಲ್ನಲ್ಲಿ ಶ್ರೀಗಂಧ ಮತ್ತು ರೋಸ್ವುಡ್ ಉತ್ಪನ್ನಗಳು, ಬಿದರಿ ಕಲೆ, ಚನ್ನಪಟ್ಟಣ ಲ್ಯಾಕರ್ವೇರ್, ಕಿನ್ನಾಳ ಆಟಿಕೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಗಂಜಿಫಾ ಕಲೆ, ಲೋಹದ ಕರಕುಶಲ ಹಾಗೂ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳು ಸೇರಿದಂತೆ ಕರ್ನಾಟಕದ ವೈವಿಧ್ಯಮಯ ಕರಕುಶಲ ಉತ್ಪನ್ನಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಪರಿಚಯಿಸಲಾಗುತ್ತದೆ.
ಹೊಸ ವೇದಿಕೆಯು ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ಎಂಪೋರಿಯಂನ ಡಿಜಿಟಲ್ ವಿಸ್ತರಣೆಯಾಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕದ ಕುಶಲಕರ್ಮಿಗಳು ಮತ್ತು ಅವರ ಕಲೆಯನ್ನು ಆಧುನಿಕ ಮಾರುಕಟ್ಟೆಯೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ.
MSME, ಗಣಿ ಮತ್ತು ಜವಳಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಐಎಎಸ್, ಕರ್ನಾಟಕದ ಕರಕುಶಲ ಉತ್ಪನ್ನಗಳು ರಾಜ್ಯದ ವಿಶಿಷ್ಟ ಪರಂಪರೆ ಮತ್ತು ಕುಶಲಕರ್ಮಿಗಳ ಅಪ್ರತಿಮ ಕೌಶಲ್ಯವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
ಡಿಜಿಟಲ್ ಮಾರುಕಟ್ಟೆಯ ಮೂಲಕ ಈ ಉತ್ಪನ್ನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವುದು ಗುರಿಯಾಗಿದ್ದು, ಕಾವೇರಿಯ ಆನ್ಲೈನ್ ಮಾರಾಟವನ್ನು ಮೂರು ವರ್ಷಗಳಲ್ಲಿ ₹5 ಕೋಟಿಗೆ ಹೆಚ್ಚಿಸುವುದರ ಜೊತೆಗೆ ಕುಶಲಕರ್ಮಿಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ.
KSHDCL ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ರಾಜಪ್ಪ, ಹೊಸ ಇ-ಕಾಮರ್ಸ್ ಪೋರ್ಟಲ್ ಮೂಲಕ ಕಾವೇರಿ ಉತ್ಪನ್ನಗಳನ್ನು ಹೆಚ್ಚು ಗ್ರಾಹಕಸ್ನೇಹಿಯಾಗಿ ದೇಶ ಮತ್ತು ವಿದೇಶಗಳ ಗ್ರಾಹಕರಿಗೆ ತಲುಪಿಸುವುದು ಗುರಿಯಾಗಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ‘Customize Product’ ಸೌಲಭ್ಯವು ಗ್ರಾಹಕರ ಬೇಡಿಕೆ ಮತ್ತು ಕರ್ನಾಟಕದ ಕುಶಲಕರ್ಮಿಗಳ ಕೌಶಲ್ಯದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
