Home ಬೆಂಗಳೂರು ನಗರ Cauvery Water to Tamil Nadu | ಕೇಂದ್ರ ಸರಕಾರ ಪರಿಣತರ ತಂಡ ಕಳಿಸಲಿ —...

Cauvery Water to Tamil Nadu | ಕೇಂದ್ರ ಸರಕಾರ ಪರಿಣತರ ತಂಡ ಕಳಿಸಲಿ — ಸಚಿವ ಎಂ.ಬಿ ಪಾಟೀಲ ಆಗ್ರಹ

40
0
Cauvery Water to Tamil Nadu | Central government should send a team of experts — Minister MB Patil demands
Cauvery Water to Tamil Nadu | Central government should send a team of experts — Minister MB Patil demands

ಬೆಂಗಳೂರು:

ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟ ಸ್ಥಿತಿ ಎದುರಾಗಿದ್ದು, ಕೇಂದ್ರ ಸರಕಾರವು ಪರಿಣತರ ತಂಡವನ್ನು ಕಳಿಸಿಕೊಟ್ಟು, ವಾಸ್ತವಾಂಶಗಳ ಪರಿಶೀಲನೆಗೆ ಮುಂದಾಗಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಗುರುವಾರ ಆಗ್ರಹಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಈ ವಿಷಯದಲ್ಲಿ ಈಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಪರಿಣತರ ತಂಡ ಖುದ್ದು ಪರಿಶೀಲಿಸಿದ ನಂತರ ತನ್ನ ವರದಿ ನೀಡಿದ ಮೇಲಷ್ಟೆ ಮುಂದಿನ ಹೆಜ್ಜೆ ಏನೆಂದು ಯೋಚಿಸಬಹುದು. ಇಂತಹ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರೆಲ್ಲ ಸೇರಿಕೊಂಡು ರಾಜ್ಯದ ಸ್ಥಿತಿಯನ್ನು ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಿಕೊಡಬೇಕು” ಎಂದರು.

ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಪ್ರತಿನಿಧಿಗಳು ಕರ್ನಾಟಕದ ಹಿತ ಕಾಪಾಡಬೇಕು. ಹಿಂದೆ ಅನಂತಕುಮಾರ್ ಪಕ್ಷಾತೀತವಾಗಿ ಕೊಡುತ್ತಿದ್ದ ಸಹಕಾರವನ್ನು ಈಗ ನೆನಪಿಸಿಕೊಳ್ಳಬೇಕು. ಇದರ ಜತೆಯಲ್ಲೇ ಬರಗಾಲದ ವರ್ಷಗಳಲ್ಲಿ ಕಾವೇರಿ ನೀರಿನ ಹಂಚಿಕೆ ಹೇಗಿರಬೇಕು ಎನ್ನುವುದಕ್ಕೆ ಸಂಕಷ್ಟ ಸೂತ್ರವನ್ನು ಕೇಂದ್ರ ಸರಕಾರವು ರೂಪಿಸಬೇಕು ಎಂದು ಅವರು ಪ್ರತಿಪಾದಿಸಿದರು.

ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಈ ವಿವಾದವು ಸುಪ್ರೀಂ ಕೋರ್ಟ್ ಮುಂದೆ ಬಂದಾಗ ತಮಿಳುನಾಡಿನವರು ಬೆಂಗಳೂರಿಗೆ ನೀರು ಕೊಡಬಾರದು ಎಂದು ತಕರಾರು ತೆಗೆದರು. ಆದರೆ ರಾಜ್ಯದ ವಕೀಲರ ತಂಡ ಸಮರ್ಥವಾಗಿ ಕೆಲಸ ಮಾಡಿ, ನಮ್ಮ ವಾದಕ್ಕೆ ಬೆಲೆ ಸಿಕ್ಕುವಂತೆ ನೋಡಿಕೊಂಡಿತು. ಇದರಿಂದ ಮೇಕೆದಾಟು ಅಣೆಕಟ್ಟು ವಿಚಾರಕ್ಕೂ ಬೆಲೆ ಬಂತು. ಆದರೆ ಇದರಿಂದ ತಮಗೂ ಲಾಭವಿದೆ ಎನ್ನುವುದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಇದರಲ್ಲೂ ಕೇಂದ್ರ ಸರಕಾರವು ಮಧ್ಯೆ ಪ್ರವೇಶಿಸಬೇಕು ಎಂದು ಅವರು ನುಡಿದರು.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರವು ಉದಾಸೀನ ತೋರಿಸುತ್ತಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ನಮ್ಮ ವಕೀಲರ ತಂಡ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಹೆಜ್ಜೆಗಳನ್ನು ಇಡುತ್ತಿದೆ ಎಂದು ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಣ್ಣ ಹೇಳಿಕೆ ಕುರಿತು ಹೈಕಮಾಂಡ್ ತೀರ್ಮಾನ

ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಮೂವರು ಡಿಸಿಎಂಗಳು ಇರಬೇಕು ಎಂದು ಹೇಳಿರುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಹೈಕಮಾಂಡ್ ಮನಸ್ಸು ಮಾಡಿದರೆ ಮೂವರಷ್ಟೇ ಅಲ್ಲ, ನಾಲ್ವರು ಡಿಸಿಎಂ ಬೇಕಾದರೂ ಮಾಡಬಹುದು ಎಂದು ಸಚಿವರು ಹೇಳಿದರು.

ಅನೇಕ ಸಮುದಾಯಗಳಿಗೆ ಇನ್ನೂ ರಾಜಕೀಯ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜಣ್ಣ ಮೂರು ಡಿಸಿಎಂ ಬಗ್ಗೆ ಮಾತನಾಡಿರಬಹುದು. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ದುರಾಸೆ ಇರಬಾರದು ಅಷ್ಟೆ. ಬೇಕು-ಬೇಡಗಳ ಬಗ್ಗೆ ಬಹಿರಂಗವಾಗಿ ಏನೂ ಹೇಳಲ್ಲ; ಬದಲಿಗೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ಇದರಿಂದ ಜೆಡಿಎಸ್ ಬಣ್ಣ ಬಯಲಾಗಿದೆ. ನಮ್ಮ ಪಕ್ಷವು ಏನಿಲ್ಲವೆಂದರೂ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಪಾಟೀಲ ಹೇಳಿದರು.

LEAVE A REPLY

Please enter your comment!
Please enter your name here