ಬೆಂಗಳೂರು:
“ಕಾವೇರಿ ವಿಚಾರ, ರಾಜ್ಯದ ಹಿತಾಸಕ್ತಿಯ ವಿಚಾರಗಳಿಗೆ ಪ್ರಧಾನಿ ಮೋದಿಯವರ ಎದುರು ನಿಂತು ಮಾತನಾಡುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕರ್ನಾಟಕಕ್ಕೆ ತೊಂದರೆ ಆಗಿರುವುದೇ ಇಂತಹ ನಾಯಕರಿಂದ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಕುಮಾರಕೃಪಾ ಅತಿಥಿಗೃಹದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು: “ಕೇಂದ್ರ ಪರಿಸರ ಇಲಾಖೆಯಿಂದ ಅನೇಕ ಕಾಮಗಾರಿಗೆ ನಿರಪೇಕ್ಷಣಾ ಪತ್ರ ತರಲು ಬಿಜೆಪಿ ಕೈಯಲ್ಲಿ ಆಗಿಲ್ಲ. ರಾಜ್ಯದ ಅಭಿವೃದ್ದಿಗೆ ಅವರಿಂದಲೇ ತೊಂದರೆ ಆಗುತ್ತಿದೆ. ನೀರಿನ ವಿಚಾರದಲ್ಲಿ ರಾಜಕಾರಣ ನಮಗೆ ಬೇಕಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎನ್ನುವುದು ನನ್ನ ಧೋರಣೆ. ಬಿಜೆಪಿಯವರು ನನಗೆ ಬೈಯಲಿ, ಉಗಿಯಲಿ, ಏನು ಬೇಕಾದರೂ ಹೇಳಲಿ, ನಾನು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡುತ್ತೇನೆ.”
ಎಲ್ಲಾ ನದಿ ವ್ಯಾಜ್ಯಗಳು ಮೂರು ವರ್ಷಗಳಲ್ಲಿ ಇಥ್ಯರ್ತವಾಗಬೇಕು ಎಂದು ಕೇಂದ್ರ ಸರ್ಕಾರವೇ ಕಾನೂನು ಮಾಡಿದೆ. ಅವರೇ ಎರಡೂ ರಾಜ್ಯಗಳನ್ನು ಕೂರಿಸಿಕೊಂಡು ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂಥೆಂಥ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ, ಇದು ಆಗುವುದಿಲ್ಲವೇ? ಮೇಕೆದಾಟು ಯೋಜನೆ ಆಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.
ಇಂಡಿಯಾ ಸಭೆ ಮಾಡುತ್ತಾರೆ, ನೀರಿನ ವಿಚಾರಕ್ಕೆ ಸಭೆ ನಡೆಸಲು ಆಗುವುದಿಲ್ಲವೇ ಎನ್ನುವ ಪ್ರತಿಪಕ್ಷಗಳ ಪೃಶ್ನೆಗೆ, “ನಾವು ಎಲ್ಲಾ ಸಭೆ ಮಾದಿದ್ದೇವೆ. ಆಯಾಯಾ ನಾಯಕರಿಗೆ ಅವರ ರಾಜ್ಯಗಳ ಹಿತಾಸಕ್ತಿ ಮುಖ್ಯ. ಮೇಲೆ ಕುಳಿತಿರುವ ಕೇಂದ್ರ ಸರ್ಕಾರಕ್ಕೆ ವಾಸ್ತಾವಾಂಶ ಗೊತ್ತಿದೆ. ಇಬ್ಬರನ್ನು ಕರೆಸಿ ಮಾತುಕತೆ ನಡೆಸಲಿ.”
ಕಾನೂನು ತಜ್ಞರ ಸಲಹೆಯಂತೆ ನಡೆಯುತ್ತೇವೆ
“ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಮೊದಲು ಎರಡು ದಿನ ನೀರು ಹರಿಸಿ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.
ನಾವು ನೀರು ಬಿಡುವುದಿಲ್ಲ ಎಂದು ಹೇಳಿದ್ದೆವು. ಆದರೆ ಸುಪ್ರೀಂ ಕೋರ್ಟಿನ ಮುಂದೆ ಹೋದಾಗ ಆದೇಶ ಪಾಲನೆ ಮಾಡಲಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಪಾಲನೆ ಮಾಡದೆ ಇದ್ದ ಸಂದರ್ಭದಲ್ಲಿ ತೊಂದರೆಯಾಗುತ್ತದೆ ಎನ್ನುವ ಅಭಿಪ್ರಾಯ ಬಂದಿದೆ.
ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ವಸ್ತುಸ್ಥಿತಿ ವಿವರಿಸಿದ್ದೇನೆ. ಮುಂದೆ ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುವುದನ್ನೂ ಸಹ ತಿಳಿಸಿದ್ದೇವೆ. ದೆಹಲಿಯಲ್ಲಿ ಸಚಿವರ ಬಳಿ ಚರ್ಚೆ ಏನಾಯಿತು ಎಂದು ಸಂದರ್ಭ ಬಂದಾಗ ವಿವರಿಸುತ್ತೇನೆ.”