ಹುಬ್ಬಳ್ಳಿ:
ಕಾವೇರಿ ನದಿ ನೀರಿಗಾಗಿ ಎಲ್ಲಿವರೆಗೂ ಹೋರಾಟ ನಡೆಯುತ್ತದೆಯೋ ಅಲ್ಲಿವರೆಗೂ ನಮ್ಮ ಬಿಜೆಪಿ ಬೆಂಬಲ ಇರುತ್ತದೆ. ರಾಜ್ಯ ಸರ್ಕಾರಕ್ಕೆ ತಡವಾಗಿಯಾದರೂ ಬುದ್ದಿ ಬಂದಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮಿಳುನಾಡಿಗೆ ಈಗ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶ ಬಂದಿದೆ. 10 ಸಾವಿರ ಕ್ಯೂಸೆಕ್ಸ್ ಆದೇಶ ಬಂದಾಗ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದರೆ, ಅಷ್ಟು ದೊಡ್ಡ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ. ತಡವಾಗಿಯಾದರೂ ಸರ್ಕಾರಕ್ಕೆ ಬುದ್ದಿ ಬಂದಿದೆ ಎಂದರು.
ಈಗಾಗಲೇ ಸಾಕಷ್ಟು ನೀರು ಹರಿದು ಹೋಗಿದೆ. ತಮಿಳುನಾಡು ಟ್ರಿಬ್ಯುನಲ್ ಆದೇಶವನ್ನ ಉಲ್ಲಂಘನೆ ಮಾಡಿದೆ. ಕುಡಿಯುವ ನೀರಿಗೆ ಬಹುದೊಡ್ಡ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಬರ ಪರಿಹಾರ ನೀಡಬೇಕು
ಉತ್ತರ ಕರ್ನಾಟಕ ಬಾಗದಲ್ಲಿ ಸಾಕಷ್ಟು ಬರಗಾಲ ಇದೆ. ಮಳೆಯಿಲ್ಲದೆ ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಆದರೆ ಈವರೆಗೂ ಬೆಳೆ ಪರಿಹಾರಕ್ಕೆ ರಾಜ್ಯಸರ್ಕಾರ ಮುಂದಾಗಿಲ್ಲ. ಹಿಂದೆ ಪ್ರವಾಹ ಬಂದಾಗ ನಾವು 2 ಪಟ್ಟು ಪರಿಹಾರ ನೀಡಿದ್ದೇವು . ರಾಜ್ಯ ಸರ್ಕಾರ ಪರಿಹಾರ ನೀಡುವ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕಾವೇರಿ ಅಷ್ಟೇ ಅಲ್ಲ ಕೃಷ್ಣೆಯ ಹಿತರಕ್ಷಣೆಗೂ ಮುಂದಾಗಬೇಕು. ಈ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂದರು.
ಆಪರೇಷನ್ ನಿಂದ ಕಾಂಗ್ರೆಸ್ ಗೆ ಲಾಭವಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ ಮತ್ತೆ ಆಪರೇಶನ್ ಗೆ ಕಾಂಗ್ರೆಸ್ ಮುಂದಾಗಿದೆ ಇದು ಕಾಂಗ್ರೆಸ್ ನ ವೀಕ್ ನೆಸ್. ಕೆಲವರು ಟಿಕೆಟ್ ಸಿಗದೇ ಇದ್ದವರು ಕಾಂಗ್ರೆಸ್ ಗೆ ಹೋಗುತ್ತಾರೆ. ಅದರಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಿಲ್ಲ. ಟಿಕೆಟ್ ಸಿಗದೇ ಇದ್ದವರು ಹೋಗುವುದು ಸಹಜ ಅದರ ಬಗ್ಗೆ ನಾವೇನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ನ ಈ ಆಪರೇಶನ್ ನಿಂದ ರಾಜಕೀಯವಾಗಿ ಯಾವುದೇ ಲಾಭವಾಗುವುದಿಲ್ಲ ಎಂದು ಹೇಳಿದರು.